ಬೆಂಗಳೂರು: ಇಂಡಿಯನ್ ಪ್ರಿಮೀಯರ್ ಲೀಗ್ನ (Indian Premier League) 16 ನೇ ಅವೃತ್ತಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಪಂದ್ಯದೊಂದಿಗೆ ಆರಂಭವಾಗಿದ್ದು, RCB ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಳಿನ ಪಂದ್ಯಕ್ಕೆ ಟಿಕೆಟ್ ಕೊಳ್ಳಲು ಸ್ಟೇಡಿಯಂ ಹೊರಗಡೆ ಜನ ಜಮಾಯಿಸಿದ್ದು, ಮುನ್ನಾ ದಿನವಾದ ಶನಿವಾರವೇ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ಪಂದ್ಯದ ದಿನ ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಸುಗಮ ಸಂಚಾರಕ್ಕಾಗಿ ಸಲಹೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿ ಪ್ರಕಟಣೆ ಹೊರಡಿಸಿದ್ದಾರೆ.
ಏಪ್ರಿಲ್ 2ರಂದು ಸಂಜೆ 4ರಿಂದ ರಾತ್ರಿ 11 ಗಂಟೆವರೆಗೆ ಈ ಕೆಳಗೆ ಉಲ್ಲೇಖಿಸಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್ ರೋಡ್, ಮ್ಯೂಸಿಯಂ ರೋಡ್, ಕಸ್ತೂರ್ಬಾ ರಸ್ತೆ, ಅಂಬೇಡದ್ಕರ್ ವೀದಿ ರಸ್ತೆ, ಟ್ರಿನಿಟಿ ಜಂಕ್ಷನ್, ಲ್ಯಾವೆಲ್ಲೆ ರೋಡ್, ವಿಟ್ಟಲ್ ಮಲ್ಯ ರಸ್ತೆ ಹಾಗೂ ನೃಪತುಂಗ ರಸ್ತೆಯ ಸುತ್ತಮುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಈ ಕೆಳಗಿನ ಪ್ರದೇಶಗಳಲ್ಲಿ ಪಾರ್ಕಿಂಗ್ಗೆ ವ್ಯವಸ್ಥೆ
- ಕಿಂಗ್ಸ್ ರಸ್ತೆ
- ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ
- ಬಿಎಂಟಿಸಿ ಟಿಟಿಂಸಿ ಶಿವಾಜಿನಗರ ಮೊದಲ ಮಹಡಿ
- ಹಳೆ ಕೆಜಿಐಡಿ ಕಟ್ಟಡ
- ಕಂಠೀರವ ಸ್ಟೇಡಿಯಂ
- ಬಿಆರ್ವಿ ಗ್ರೌಂಡ್
ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯ ನಡೆಯಲಿರುವ ಕಾರಣ ಆ ದಿನಗಳಲ್ಲಿ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ರೈಲು ಸಂಚಾರ ಇರಲಿದೆ ಎಂದು ಈಗಾಗಲೇ ಬಿಎಂಆರ್ಸಿಎಲ್ ತಿಳಿಸಿದೆ. ರಾತ್ರಿ ಮ್ಯಾಚ್ ಹಿನ್ನೆಲೆ ಬೈಯ್ಯಪ್ಪನಹಳ್ಳಿ, ಕೆಂಗೇರಿ ಮತ್ತು ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ಗಳಲ್ಲಿ ರೈಲು ಸೇವೆಗಳನ್ನು ರಾತ್ರಿ 1 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಿಸಲಾಗುತ್ತಿದ್ದು, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು 1:30ಕ್ಕೆ ಹೊರಡಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ.