ಬೆಂಗಳೂರು: ಒಳಮೀಸಲಾತಿ ನ್ಯಾಯಸಮ್ಮತವಾಗಿದೆ, ಯಾರಿಗೂ ಅನ್ಯಾಯವಾಗಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಒಳಮೀಸಲಾತಿ ನೀಡಿದ್ದಾರೆ ಇದರ ಬಗ್ಗೆ ಪ್ರಭು ಚವ್ಹಾಣ್ ವಿರೋಧ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂತು, ನಾನು ಪತ್ರ ಕೊಟ್ಟಿರೋದು ನಿಜ ಆದರೆ ನಾನು ಯಾವ ತಿಂಗಳಿನಲ್ಲಿ ಪತ್ರ ಕೊಟ್ಟಿದ್ದೇನೆ ಎನ್ನುವುದನ್ನು ನೋಡಿ. ನಾನು ಕಳೆದ ಫೆಬ್ರವರಿಯಲ್ಲಿ ಕೊಟ್ಟಿರೋದು.
ಆದರೆ ಸಚಿವ ಸಂಪುಟದಲ್ಲಿ ಮೊನ್ನೆ ಸರಿಯಾಗಿ ಚರ್ಚೆಯಾಗಿ ಒಳಮೀಸಲಾತಿ ಹಂಚಲಾಗಿದೆ. ಇದಕ್ಕೆ ಸಮ್ಮತಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ನಮ್ಮ ಸಮಾಜ ಸೇರಿ ಎಲ್ಲಾ ಸಮಾಜಕ್ಕೆ ಯಾವುದೇ ಅನ್ಯಾಯವಾಗಿಲ್ಲ ಹಾಗಾಗಿ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಮೀಸಲಾತಿ ಹಂಚಿಕೆಯಿಂದ ಯಾರಿಗೂ ಅನ್ಯಾಯವಾಗಿಲ್ಲ ಯಾರಿಗೂ ಮೋಸ ಆಗಿಲ್ಲ ನಮ್ಮ ಮುಖ್ಯಮಂತ್ರಿಯವರು ಸಂವಿಧಾನಬದ್ಧವಾಗಿ ನ್ಯಾಯವನ್ನ ಕೊಟ್ಟಿದ್ದಾರೆ. ಬಂಜಾರ, ಭೋವಿ, ಕೊರಮ ಕೊರಚರನ್ನು ಎಸ್ಸಿ ಪಂಗಡದಿಂದ ಹೊರಗೆ ಹಾಕಬೇಕು ಅನ್ನೋದರ ಬಗ್ಗೆ ನ್ಯಾಷನಲ್ ಕಮೀಷನ್ನಿಂದ ಪತ್ರ ಬಂತು.
ಆದರೆ ನಮ್ಮ ಸಿಎಂ ಅದ್ಯಾವುದು ಮಾಡಲ್ಲ ಎಂದು ಹೇಳಿ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಸದಾಶಿವ ಆಯೋಗ ವರದಿ ಇನ್ನೂ ಬಹಿರಂಗವಾಗಿಲ್ಲ. ಅದರ ಮೇಲೆ ಮೀಸಲಾತಿ ಹಂಚಿಕೆ ಮಾಡಬಾರದು ಎಂದು ನಾನು ಹೇಳಿದ್ದೆ. ಆದರೆ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಒಪ್ಪದೆ, ಆಯೋಗದ ವರದಿಯನ್ನು ಕ್ಯಾಬಿನೆಟ್ ನಲ್ಲಿ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ರಿಜೆಕ್ಟ್ ಮಾಡಿ ನಮಗೆ ಯಾವುದೇ ಅನ್ಯಾಯವಾಗದಂತೆ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಪ್ರಭು ಚವ್ಹಾಣ್ ಹೇಳಿದರು.