ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿದ್ದು, ಇದಕ್ಕೆ ಉಕ್ರೇನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. 15 ಸದಸ್ಯರ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ರಶ್ಯ ಶನಿವಾರ ವಹಿಸಿಕೊಂಡಿದೆ.
ಭದ್ರತಾ ಮಂಡಳಿಯ ಒಂದು ತಿಂಗಳ ಅಧ್ಯಕ್ಷತೆಗೆ 15 ಸದಸ್ಯ ರಾಷ್ಟ್ರಗಳು ಪರ್ಯಾಯ ಕ್ರಮದಲ್ಲಿ ಆಯ್ಕೆಯಾಗುತ್ತವೆ. ಏಪ್ರಿಲ್ ತಿಂಗಳಾವಧಿಗೆ ರಶ್ಯ ಅಧ್ಯಕ್ಷತೆ ವಹಿಸಲಿದೆ, ಆದರೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿರುವುದರಿಂದ ರಶ್ಯವನ್ನು ಅಧ್ಯಕ್ಷತೆಯಿಂದ ಅನರ್ಹಗೊಳಿಸಬೇಕು ಎಂದು ಉಕ್ರೇನ್ ಪಟ್ಟುಹಿಡಿದಿತ್ತು.
ಎಪ್ರಿಲ್ 1ರಿಂದ ಅವರು(ರಶ್ಯ) ಅಸಂಬದ್ಧತೆಯ ಮಟ್ಟವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಉಕ್ರೇನ್ನ ಕಾಯಂ ರಾಯಭಾರಿ ಸೆರ್ಗಿಯ್ ಕಿಸ್ಲಿಟ್ಸ್ಯಾ ಪ್ರತಿಕ್ರಿಯಿಸಿದ್ದಾರೆ.
ಸಂಘರ್ಷಗಳನ್ನು ತಡೆಗಟ್ಟುವುದು, ಬಿಕ್ಕಟ್ಟು ನಿವಾರಣೆಗೆ ಕ್ರಮ ಕೈಗೊಳ್ಳುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಶ್ವಸಂಸ್ಥೆ ಅಸಮರ್ಥವಾಗಿದೆ. ಆದ್ದರಿಂದ, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಕಲಾಪವನ್ನು ಹೊರತುಪಡಿಸಿ ಎಪ್ರಿಲ್ ತಿಂಗಳಲ್ಲಿ (ರಶ್ಯದ ಅಧ್ಯಕ್ಷತೆಯಲ್ಲಿ) ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ಪಾಲ್ಗೊಳ್ಳುವುದಿಲ್ಲ ಎಂದು ಉಕ್ರೇನ್ ರಾಯಭಾರಿ ಹೇಳಿದ್ದಾರೆ. ಉಕ್ರೇನ್ ಪ್ರಸ್ತುತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯನಲ್ಲ, ಆದರೆ ಯುದ್ಧಕ್ಕೆ ಸಂಬಂಧಿಸಿದ ಕಲಾಪದಲ್ಲಿ ಪಾಲ್ಗೊಳ್ಳಲು ಆ ದೇಶವನ್ನು ಆಹ್ವಾನಿಸಲಾಗುತ್ತಿದೆ ಎಂದು ಉಕ್ರೇನ್ ಅಸಮಾಧಾನ ಹೊರ ಹಾಕಿದೆ.
ಈ ಮಧ್ಯೆ, ರಶ್ಯದ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರತಾ ಮಂಡಳಿಯ ಕಲಾಪಗಳಿಗೆ ತಮ್ಮ ಕೆಳಮಟ್ಟದ ಪ್ರತಿನಿಧಿಗಳನ್ನು ಕಳುಹಿಸುವ ಬಗ್ಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಹಾಗೂ ಇತರ ಕೆಲವು ದೇಶಗಳು ಸುಳಿವು ನೀಡಿವೆ. ಆದರೆ ಕಲಾಪವನ್ನು ಬಹಿಷ್ಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ವೃತ್ತಿಪರವಾಗಿ ನಡೆದುಕೊಳ್ಳುವಂತೆ ರಶ್ಯವನ್ನು ಅಮೆರಿಕ ಆಗ್ರಹಿಸಿದೆ.