ಇಡೀ ವಿಶ್ವಕ್ಕೆ ಮಾರ್ಚ್ 15 ಗ್ರಾಹಕ ದಿನವಾದರೆ, ಭಾರತೀಯರಿಗೆ ಡಿಸೆಂಬರ್ 24 ಗ್ರಾಹಕ ದಿನವಾಗಿದೆ. ಗ್ರಾಹಕ ವ್ಯವಹಾರಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಹಕನ ಹಿತರಕ್ಷ ಣೆಯೂ ಮಾನವನ ಮೂಲಭೂತ ಹಕ್ಕು ಎಂಬ ರೀತಿಯಲ್ಲಿ ಪರಿಗಣಿಸುತ್ತಿರುವುದರಿಂದ ಎಲ್ಲೆಡೆ ಅವರ ಹಕ್ಕಿನ ಬಗ್ಗೆ ಹೆಚ್ಚೆಚ್ಚು ಮನ್ನಣೆ ದೊರೆಯುತ್ತಿದೆ.
ಇತಿಹಾಸ ಮತ್ತು ಮಹತ್ವ:
ಈ ದಿನದಂದು ಗ್ರಾಹಕ ಸಂರಕ್ಷಣಾ ಕಾಯ್ದೆ, 1986ರ ರಾಷ್ಟ್ರಪತಿ ಒಪ್ಪಿಗೆಯನ್ನು ಪಡೆದು ಜಾರಿಗೆ ಬಂದಿತು.
ದೋಷಯುಕ್ತ ಸರಕುಗಳು, ಸೇವೆಗಳ ಕೊರತೆ ಮತ್ತು ಅನ್ಯಾಯದ ವ್ಯಾಪಾರದಂತಹ ವಿವಿಧ ರೀತಿಯ ಶೋಷಣೆಯ ವಿರುದ್ಧ ಗ್ರಾಹಕರಿಗೆ ಪರಿಣಾಮಕಾರಿ ಸುರಕ್ಷತೆಗಳನ್ನು ಒದಗಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ.
ಸಮಯೋಚಿತ ಮತ್ತು ಪರಿಣಾಮಕಾರಿ ಆಡಳಿತ ಮತ್ತು ಗ್ರಾಹಕರ ವಿವಾದದ ಇತ್ಯರ್ಥಕ್ಕೆ ಅಧಿಕಾರಿಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಗ್ರಾಹಕ ಸಂರಕ್ಷಣಾ ಮಸೂದೆ, 2019ಕ್ಕೆ ಸಂಸತ್ತು ಅನುಮತಿ ನೀಡಿದೆ.
ರಾಷ್ಟ್ರಪತಿ ಒಪ್ಪಿಗೆಯನ್ನು ಪಡೆದ ನಂತರ ಇದು ಗ್ರಾಹಕರ ಹಕ್ಕುಗಳನ್ನು ಉತ್ತೇಜಿಸಲು, ರಕ್ಷಿಸಲು ಮತ್ತು ಜಾರಿಗೊಳಿಸಲು ಕಾರ್ಯ ನಿರ್ವಹಿಸುತ್ತಿದೆ.
ಗ್ರಾಹಕರ ಪ್ರಮುಖ ಹಕ್ಕುಗಳು
ಭಾರತೀಯ ಗ್ರಾಹಕ ಹಿತರಕ್ಷ ಣಾ ಕಾಯ್ದೆಯ ಅನ್ವಯ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಈ ಕಾಯ್ದೆಯಲ್ಲಿ ಕೆಲವು ಹಕ್ಕುಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಈ ಕಾಯ್ದೆ ನೀಡುವ ಹಕ್ಕುಗಳ ಹೊರತಾಗಿಯೂ ವಿಶ್ವಸಂಸ್ಥೆಯು ಒಪ್ಪಿಕೊಂಡಿರುವ ಇನ್ನೂ ಅನೇಕ ಹಕ್ಕುಗಳಿವೆ.
ಸುರಕ್ಷ ತೆಯ ಹಕ್ಕು
ಗ್ರಾಹಕ ತಾನು ಖರೀದಿಸುವ ವಸ್ತು ಅಥವಾ ಸೇವೆಯಿಂದ ಹಾನಿಯಾಗದಂತೆ ರಕ್ಷಿಸಿಕೊಳ್ಳುವ ಹಕ್ಕು. ಅಂದರೆ, ಖರೀದಿಯಾದ ವಸ್ತುಗಳಿಂದ ಗ್ರಾಹಕನಿಗೆ ಯಾವುದೇ ರೀತಿಯ ನಷ್ಟವನ್ನುಂಟು ಮಾಡಬಾರದು. ಹಾಗೆಯೇ, ಸೇವೆ ಒದಗಿಸುವಾತನಿಂದಲೂ ತೊಂದರೆಯಾಗಬಾರದು. ಈ ಹಕ್ಕನ್ನು ಗ್ರಾಹಕನ ಹಿತವನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ. ಯಾಕೆಂದರೆ, ಪ್ರೆಷರ್ ಕುಕ್ಕರ್, ಗ್ಯಾಸ್ ಸಿಲಿಂಡರ್ ಮತ್ತು ಇತರ ವಿದ್ಯುನ್ಮಾನ ಯಂತ್ರೋಪಕರಣಗಳು ಉತ್ಪಾದನಾ ದೋಷಗಳನ್ನು ಹೊಂದಿರುತ್ತವೆ. ಇಂಥ ಕಳಪೆ ವಸ್ತುಗಳನ್ನು ಖರೀದಿಸಿದ ಗ್ರಾಹಕನ ಜೀವ, ಆರೋಗ್ಯ ಮತ್ತು ಆಸ್ತಿಗೆ ಕುತ್ತು ಉಂಟಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ.
ಮಾಹಿತಿ ಹಕ್ಕು
ವಸ್ತುಗಳು ಅಥವ ಸೇವಾ ಗುಣಮಟ್ಟ, ಪ್ರಮಾಣ, ಪರಿಶುದ್ಧತೆ ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕನಿಗಿದೆ. ಯಾವುದೇ ರೀತಿಯ ಅಕ್ರಮ ಹಾಗೂ ಮೋಸವನ್ನು ತಡೆಯುವ ನಿಟ್ಟಿನಲ್ಲಿ ಗ್ರಾಹಕನಿಗೆ ಈ ಹಕ್ಕು ನೀಡಲಾಗಿದೆ. ಹಾಗಾಗಿ, ವಸ್ತುಗಳನ್ನು ಮಾರಾಟ ಮಾಡುವಾತ ಈ ಎಲ್ಲ ಮಾಹಿತಿಯನ್ನು ಗ್ರಾಹಕನಿಗೆ ನೀಡಲೇಬೇಕಾಗುತ್ತದೆ. ಒಂದು ವೇಳೆ ಸೂಕ್ತ ಮಾಹಿತಿ ನೀಡದಿದ್ದರೆ ಅದು ಕಾನೂನು ಪ್ರಕಾರ ಅಪರಾಧ ಎನಿಸಿಕೊಳ್ಳುತ್ತದೆ.
ಆಯ್ಕೆಯ ಹಕ್ಕು
ಪ್ರತಿಯೊಬ್ಬ ಗ್ರಾಹಕನೂ ತನ್ನ ಇಚ್ಛೆಯಂತೆ ವಸ್ತುಗಳನ್ನು ಖರೀದಿಸುವ ಮತ್ತು ಸೇವೆಯನ್ನು ಪಡೆಯುವ ಹಕ್ಕು ಹೊಂದಿದ್ದಾನೆ. ಆಯ್ಕೆ ಹಕ್ಕು ಎಂದರೆ ಬೇರೇನೂ ಅಲ್ಲ; ನಾನಾ ನಮೂನೆಯ ವಸ್ತುಗಳ ಲಭ್ಯತೆ, ಸಾಮರ್ಥ್ಯ ಮತ್ತು ಅವುಗಳನ್ನು ಸ್ಪರ್ಧಾತ್ಮಕ ಬೆಲೆ ತೆತ್ತು ಖರೀದಿಸುವ ವಾತಾವರಣವನ್ನು ಸೃಷ್ಟಿಸಬೇಕಾಗುತ್ತದೆ. ಇಲ್ಲಿ ಸ್ಪರ್ಧಾತ್ಮಕ ಬೆಲೆ ಎಂದರೆ, ನ್ಯಾಯಬದ್ಧವಾದ ಬೆಲೆಯಷ್ಟೆ. ಉತ್ಪಾದಕ ಅಥವಾ ಪೂರೈಕೆದಾರ ಯಾವುದೇ ಕಾರಣಕ್ಕೂ ನಿಗದಿತ ಬ್ರ್ಯಾಂಡ್ನ ವಸ್ತುವನ್ನು ಖರೀದಿಸುವಂತೆ ಅಥವಾ ಸೇವೆಯನ್ನು ಪಡೆದುಕೊಳ್ಳುವಂತೆ ಗ್ರಾಹಕನ ಮೇಲೆ ಒತ್ತಡ ಹೇರುವಂತಿಲ್ಲ. ಗ್ರಾಹಕ ತಾನು ಇಷ್ಟಪಟ್ಟ ಹಾಗೂ ತನಗೆ ಸೂಕ್ತವಾದ ಉತ್ಪನ್ನ ಪಡೆಯುವಲ್ಲಿ ಸಂಪೂರ್ಣ ಸ್ವತಂತ್ರವಾಗಿರುತ್ತಾನೆ.
ಕೇಳುವ ಅಥವಾ ಪ್ರಾತಿನಿಧ್ಯದ ಹಕ್ಕು
ಈ ಹಕ್ಕಿನ ಪ್ರಕಾರ, ಪ್ರತಿನಿಧಿಸುವ ಅಥವಾ ಆತನ ಹಿತಾಸಕ್ತಿಗಳನ್ನು ಪರಿಗಣಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಒಂದು ವೇಳೆ ಗ್ರಾಹಕ ಶೋಷಣೆಗೊಳಗಾಗುತ್ತಿದ್ದರೆ ಅಥವಾ ಉತ್ಪನ್ನದ ವಿರುದ್ಧ ಯಾವುದೇ ದೂರುಗಳಿದ್ದರೆ ಅಥವಾ ಸೇವೆಯ ಬಗ್ಗೆ ಅತೃಪ್ತಿ ಇದ್ದರೆ ಅಂಥ ಸಂದರ್ಭದಲ್ಲಿ ಆತನ ವಾದವನ್ನು ಕೇಳಬೇಕಾಗುತ್ತದೆ. ಹಾಗೆಯೇ ಆತನ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸರಕಾರಿ ಮತ್ತು ನೀತಿ ನಿರೂಪಣಾ ಸಂಸ್ಥೆಗಳಲ್ಲಿ ಗ್ರಾಹಕ ತನ್ನ ಪ್ರಾತಿನಿಧ್ಯವನ್ನು ಪಡೆಯುವ ಹಕ್ಕು ಇದರಲ್ಲಿದೆ. ಈ ಹಕ್ಕಿನಡಿ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ಗ್ರಾಹಕರು ದೂರುಗಳನ್ನು ಸ್ವೀಕರಿಸಲು ಕೇಂದ್ರಗಳನ್ನು ಆರಂಭಿಸಬೇಕಾಗುತ್ತದೆ.
ಪರಿಹಾರ ಕೇಳುವ ಹಕ್ಕು
ಯಾವುದೇ ಶೋಷಣೆ ಹಾಗೂ ನ್ಯಾಯಬದ್ಧವಲ್ಲದ ವ್ಯಾಪಾರದ ವಿರುದ್ಧ ಗ್ರಾಹಕ ಪರಿಹಾರವನ್ನು ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಈ ಹಕ್ಕು ನೀಡುತ್ತದೆ. ಈ ಹಕ್ಕು ಶೋಷಣೆಯ ವಿರುದ್ಧ ಗ್ರಾಹಕನಿಗೆ ನ್ಯಾಯ ಕಲ್ಪಿಸುವ ಭರವಸೆಯನ್ನು ನೀಡುತ್ತದೆ. ಜತೆಗೆ ಅನ್ಯಾಯಕ್ಕೊಳಗಾದ ಗ್ರಾಹಕನಿಗೆ ಪರಿಹಾರ ಕೂಡ ನೀಡಬೇಕಾಗುತ್ತದೆ. ಅದು ನಗದು ರೂಪದಲ್ಲಿ ಇರಬಹುದು ಅಥವಾ ಬದಲಿ ವಸ್ತುಗಳ ಪೂರೈಕೆಯಾಗಿರಬಹುದು ಇಲ್ಲವೇ ವಸ್ತುಗಳನ್ನು ದುರಸ್ತಿ ಮಾಡುವುದು ಆಗಿರಬಹುದು. ಆದರೆ, ಈ ರೀತಿಯ ಯಾವುದೇ ಪರಿಹಾರವು ಗ್ರಾಹಕನನ್ನು ತೃಪ್ತಿಪಡಿಸುವಂತಿರಬೇಕು. ಈ ಹಿನ್ನೆಲೆಯಲ್ಲಿ ಸರಕಾರ ರಾಷ್ಟ್ರ ಹಾಗೂ ರಾಜ್ಯಗಳ ಮಟ್ಟದಲ್ಲೇ ಅನೇಕ ಪರಿಹಾರ ವೇದಿಕೆಗಳನ್ನು ಸ್ಥಾಪಿಸಿವೆ.
ಗ್ರಾಹಕ ಶಿಕ್ಷ ಣ ಹಕ್ಕು
ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯುವುದನ್ನು ಇದು ಕಲ್ಪಿಸುತ್ತದೆ. ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರಕಾರದಿಂದ ಗ್ರಾಹಕರಿಗೆ ಶಿಕ್ಷ ಣ, ಶಾಲಾ ಪಠ್ಯದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ಮತ್ತು ಅನೇಕ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸರಕಾರದ ಕರ್ತವ್ಯವಾಗಿದೆ. ಸರಕಾರವೂ ಗ್ರಾಹಕರ ಹಕ್ಕಿನ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ.
ಗ್ರಾಹಕರ ಜವಾಬ್ದಾರಿಗಳು
ಗ್ರಾಹಕರು ಹೇಗೆ ಹಕ್ಕುಗಳನ್ನು ಹೊಂದಿದ್ದಾರೆಯೋ ಹಾಗೆ ಅವರಿಗೆ ಜವಾಬ್ದಾರಿಗಳಿವೆ. ಹಕ್ಕುಗಳು ಇವೆ ಎಂದ ಮಾತ್ರಕ್ಕೆ ಅವುಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವಂತಿಲ್ಲ. ಅವುಗಳನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕಾಗುತ್ತದೆ. ನೀವು ಖರೀದಿಸಿವ ವಸ್ತುಗಳ ಸಮಗ್ರ ಮಾಹಿತಿ ಪಡೆದುಕೊಳ್ಳುವುದು, ವಸ್ತು ಖರೀದಿಸುವ ಮುನ್ನ ನಿಮ್ಮನ್ನು ವಿಮರ್ಶೆಗೊಳಪಡಿಸಿಕೊಳ್ಳಬೇಕು, ಒಪ್ಪಂದ, ಕರಾರು ಪತ್ರ ಮಾಡಿಕೊಳ್ಳುವಾಗ ಜಾಗರೂಕರಾಗಿರಬೇಕು ಮತ್ತು ಬಿಲ್ಗಳನ್ನು ಕೇಳಿ ಪಡೆದುಕೊಳ್ಳಬೇಕು. ಗ್ರಾಹಕರು ಸಂಘಟಿತರಾಗಬೇಕು. ಕಂಡಿದ್ದನ್ನೆಲ್ಲಾ ಖರೀದಿಸುವ ಹುಚ್ಚು ಆಸೆಗೆ ಒಳಗಾಗಬಾರದು. ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಂದಾಗ ಅದರ ವಿರುದ್ಧ ಹೋರಾಡಲು ಹಿಂಜರಿಯಬಾರದು.
ಗ್ರಾಹಕ ನ್ಯಾಯಾಲಯಗಳು
ಗ್ರಾಹಕರ ಸಂಬಂಧಿ ವ್ಯಾಜ್ಯಗಳನ್ನು ನಿರ್ವಹಿಸುವುದಕ್ಕಾಗಿಯೇ ಸರಕಾರ ಗ್ರಾಹಕ ನ್ಯಾಯಾಲಯಗಳನ್ನ ಸ್ಥಾಪಿಸಿದೆ. ಈ ನ್ಯಾಯಾಲಯ ಮುಖ್ಯ ಗುರಿಯೇ ಗ್ರಾಹಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಮಾರಾಟಗಾರರು ಗ್ರಾಹಕರಿಗೆ ನ್ಯಾಯಬದ್ಧ ಸೇವೆ ಒದಗಿಸುವುದನ್ನು ಖಚಿತಪಡಿಸುವುದು ಆಗಿದೆ. ಒಂದು ವೇಳೆ ಗ್ರಾಹಕರು, ಮಾರಾಟಗಾರರಿಂದ ಶೋಷಣೆಗೊಳಗಾದರೆ, ಪೀಡನೆಗೊಳಗಾದರೆ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಒಂದು ವೇಳೆ, ಶೋಷಣೆಯ ಬಗ್ಗೆ ಖಚಿತವಾದ ಸಾಕ್ಷ ್ಯಗಳಿದ್ದರೆ ಕೋರ್ಟ್ ಗ್ರಾಹಕರ ಪರವಾಗಿಯೇ ನ್ಯಾಯವನ್ನು ನೀಡುತ್ತದೆ. ಅಂದರೆ, ಬಿಲ್ಗಳು ಮತ್ತು ಇತರೆ ಕಾಗದ ಪತ್ರಗಳು ಇರಬೇಕಷ್ಟೆ. ಒಂದು ವೇಳೆ, ಗ್ರಾಹಕನ ಬಳಿ ಸಂಬಂಧಿಸಿ ಬಿಲ್ ಮತ್ತು ದಾಖಲೆಗಳು ಇಲ್ಲದಿದ್ದರೆ ನ್ಯಾಯ ಪಡೆಯುವುದು ಭಾರಿ ಕಷ್ಟವಾಗುತ್ತದೆ.