ಬೆಳಗಾವಿ: ಮಾಜಿ ಸಚಿವ, ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ ರವಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.
ಹೌದು ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನೂ ದೇವರ ಮೇಲೆ ಭಕ್ತಿ ಇಟ್ಟುಕೊಂಡವಳು, ನಾನು ದೇಶದ ಎಲ್ಲಾ ದೇವಾನುದೇವತೆ ನಂಬಿದಂತವಳು, ನಾನು ಆ ಪದ ಅಂದಿಲ್ಲ ಅಂದಿಲ್ಲ ಅಂತಾ ಹೇಳುತ್ತಿದ್ದಾರಲ್ಲ ಹಾಗಾದ್ರೆ ನಾನು ಕುಟುಂಬ ಸಮೇತ ಬರುವೆ, ನೀವೂ ಬನ್ನಿ ಆಣೆ ಪ್ರಮಾಣ ಮಾಡೋಣ ಎಂದು ಹೇಳಿದ್ದಾರೆ.
ದುರ್ಬುದ್ಧಿ ಇದ್ದಂತ ಮನುಷ್ಯನಿಂದ ನಾನು ಜವಾಬು ಬಯಸಲ್ಲ, ಆದ್ರೆ ಜನರ ಕಣ್ಣಿಗೆ ಹಾಗೂ ಅವರ ಕಾರ್ಯಕರ್ತರಿಗೆ ನಾಯಕರಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಇಡೀ ದೇಶದ ಜನ ಧರ್ಮಕ್ಕೆ ಇನ್ನೊಂದು ಹೆಸರು ಧರ್ಮಸ್ಥಳ ಅಂತಾರೆ. ನೀವು ದೇವರನ್ನು ಬಹಳಷ್ಟು ನಂಬಿದೀರಾ ಧರ್ಮಸ್ಥಳ ನಿಮ್ಮ ಊರಿಗೆ ಸಾಕಷ್ಟು ಹತ್ತಿರ ಇದೆ. ನೀವು ಬಂದು ದೇವರ ಮೇಲೆ ಪ್ರಮಾಣ ಮಾಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.