ಈ ಜಿರಳೆಗಳ ಕಾಟ ಮನೆಯಲ್ಲಿ ಒಮ್ಮೆ ಶುರುವಾಯ್ತು ಎಂದರೆ ಸಾಕು ಮತ್ತೆ ಅದರಿಂದ ಮನೆಯ ವಸ್ತುಗಳನ್ನು, ಬಟ್ಟೆ ಬರೆಗಳನ್ನು, ಆಹಾರ ಪದಾರ್ಥಗಳನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಜಿರಳೆಗಳು ಮಾತ್ರವಲ್ಲ ನೊಣಗಳು ಹಾಗೂ ಇರುವೆಗಳು ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳಾಗಿದ್ದರೂ ಸಹ ಇವುಗಳು ನೀಡುವ ಕಾಟವನ್ನು ಸಹಿಸೋಕೆ ಆಗುವುದಿಲ್ಲ. ಆದರೆ ನೀವು ಇಲ್ಲಿ ನೀಡಲಾದ ಕೆಲವೊಂದು ಸಲಹೆಗಳನ್ನು ಪಾಲಿಸಿದಲ್ಲಿ ಇವು ಮೂರರ ಕಾಟದಿಂದ ಸುಲಭವಾಗಿ ಪಾರಾಗಬಹುದಾಗಿದೆ
ಮನೆಯಲ್ಲಿ ಜಿರಳೆಗಳು ಹೆಚ್ಚಾದರೆ ಕಾಯಿಲೆ ಕೂಡ ಹೆಚ್ಚಾದಂತೆ. ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಿರಳೆಗಳು ಅಡ್ಡಾಡಿದ ಜಾಗದಲ್ಲಿದ್ದ ಆಹಾರ ಸೇವಿಸಬಾರದು. ಏಕೆಂದರೆ ಇದರಿಂದ ನಾನಾ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು
ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವರು ಮಂದಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಪ್ರೇಗಳನ್ನು ತಂದು ಸಿಂಪಡಿಸುತ್ತಾರೆ. ಹೀಗಿದ್ದರೂ ಮನೆಯಿಂದ ಜಿರಳೆಗಳು ಹೋಗುವುದಿಲ್ಲ. ಹಾಗಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸುವ ಮೂಲಕ ಮನೆಯಿಂದ ನೀವು ಜಿರಳೆಗಳನ್ನು ಹಿಮ್ಮೆಟ್ಟಿಸಬಹುದು.
ಪುಲಾವ್ ಎಲೆಗಳನ್ನು ಪುಡಿ ಮಾಡಿ ನೀರಿಗೆ ಬೆರೆಸಿ ಕುದಿಸಿ, ತಣ್ಣಗಾದ ಬಳಿಕ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಅಲ್ಲಿಂದ ಓಡಿಹೋಗುತ್ತವೆ.
ಸ್ಪ್ರೇ ಬಾಟಲಿಯಲ್ಲಿ ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ ಅಡುಗೆಮನೆ ಹಾಗೂ ಮನೆಯ ಮೂಲೆಗಳಲ್ಲಿ ಸ್ಪ್ರೇ ಮಾಡಿದರೆ ಜಿರಳೆಗಳು ಸಾಯುತ್ತವೆ.
ಅಡುಗೆ ಸೋಡಾ ಮತ್ತು ಸಕ್ಕರೆ ಮಿಶ್ರಣವನ್ನು ಬಾಟಲಿಗೆ ತುಂಬಿಸಿ ಅಡುಗೆಮನೆಯ ವಿವಿಧ ಭಾಗಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಇಲ್ಲವಾಗುತ್ತದೆ.
ಜಿರಳೆಗಳು ಇರುವ ಜಾಗಕ್ಕೆ ಬೋರಿಕ್ ಆಸಿಡ್ ಪುಡಿಯನ್ನು ಸಿಂಪಡಿಸಿದರೆ ಅವುಗಳ ವಂಶವೇ ನಾಶವಾಗುತ್ತದೆ.
ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಅಡುಗೆಮನೆಯ ಮೂಲೆಯಲ್ಲಿ ಸಿಂಪಡಿಸಿದರೆ ಜಿರಳೆಗಳು ಸಾಯುತ್ತವೆ.
ಲವಂಗದ ಪುಡಿಯನ್ನು ಜಿರಳೆ ಇರುವ ಸ್ಥಳಗಳಿಗೆ ಹಚ್ಚಿದರೆ ಜಿರಳೆಗಳು ಇಲ್ಲವಾಗುತ್ತದೆ.