ಬೆಂಗಳೂರು: ಸ್ಯಾಂಕಿ ಮೇಲ್ಸೇತುವೆ ಯೋಜನೆ ವಿಚಾರದಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸ್ಯಾಂಕಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಯೋಜನೆ ವಿಚಾರದಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ. ಆದರೂ, ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. ಚಿತ್ತಾಪುರದ ರಾಜಕೀಯವನ್ನು ಮಲ್ಲೇಶ್ವರಗೆ ತರುವ ದುಸ್ಸಾಹಸ ಮಾಡುತ್ತಿದ್ದಾರೆ. ಈ ಯೋಜನೆ ವಿರುದ್ಧ ರ್ಯಾಲಿ ನಡೆಸಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿರುವುದಕ್ಕೂ ತಮಗೂ ಸಂಬಂಧವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ ಅವರು ತಮ್ಮ ಕರ್ತವ್ಯ ನಿರ್ವಹಿಸಿರುತ್ತಾರೆ.
ಇಷ್ಟಕ್ಕೂ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೈಕೋರ್ಚ್ ಸ್ಪಷ್ಟಸೂಚನೆ ನೀಡಿರುವುದು ಇವರ ಗಮನಕ್ಕೆ ಬರದಿರುವುದು ದುರಂತ ಎಂದು ಅವರು ಟೀಕಿಸಿದ್ದಾರೆ. ಮೇಲ್ಸೇತುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್ಜಿಒಗಳ ಜತೆ ಮಾತನಾಡಿ ಅಭಿಪ್ರಾಯಗಳನ್ನು ಆಲಿಸಿದ್ದೇನೆ. ಅವರ ಸಲಹೆ ಪ್ರಕಾರ ಬಿಬಿಎಂಪಿಯು ಬಿಎಂಎಲ್ಟಿಎಗೆ ವಹಿಸಿದೆ. ಈ ಸತ್ಯ ಗೊತ್ತಿದ್ದರೂ ಮಲ್ಲೇಶ್ವರದಲ್ಲಿ ಮೂಲೆಗುಂಪಾಗಿರುವ ಕಾಂಗ್ರೆಸ್ ಆಧಾರರಹಿತ ಆರೋಪ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಚುನಾವಣೆ ಘೋಷಣೆಯಾದ ಕೂಡಲೇ ಈ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.