ನವದೆಹಲಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ʻ50 ವರ್ಷವಾದರೂ ನನಗೆ ಸ್ವಂತ ಮನೆಯಿಲ್ಲʼ ಎಂದು ಹೇಳಿಕೊಂಡಿದ್ದರು. ಇದರೊಂದಿಗೆ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಅಧಿಕೃತ ಸರ್ಕಾರಿ ನಿವಾಸವನ್ನು ತೊರೆಯುವಂತೆ ಸೂಚಿಸಿದೆ. ಈ ನಡುವೆ ಕಾಂಗ್ರೆಸ್ ನಾಯಕಿಯೊಬ್ಬರು ರಾಹುಲ್ ಗಾಂಧಿ ಅವರಿಗೆ ತಮ್ಮ 4 ಅಂತಸ್ತಿನ ಮನೆಯನ್ನೇ ಬರೆದುಕೊಟ್ಟಿದ್ದಾರೆ. ರಾಹುಲ್ ಗಾಂಧಿ ಹೆಸರಿಗೆ ಮನೆ ಬರೆದ ಬಳಿಕ ಅವರು ಪ್ರಮಾಣಪತ್ರವನ್ನು ಮಾಧ್ಯಮದವರಿಗೆ ತೋರಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷೆ ರಾಜಕುಮಾರಿ ಗುಪ್ತಾ (Rajkumari Gupta) ಅವರು ಮಂಗೋಲ್ವುರಿ ಪ್ರದೇಶದಲ್ಲಿ ತಮ್ಮ ಹೆಸರಿನಲ್ಲಿದ್ದ 4 ಅಂತಸ್ತಿನ ಮನೆಯನ್ನು ರಾಗಾ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಗುಪ್ತಾ ಅವರು ಇಂದಿರಾ ಗಾಂಧಿ ಅವರ ಕಾಲದಲ್ಲಿ ಈ ಮನೆಯನ್ನು ಪಡೆದು ಕೊಂಡಿದ್ದರು ಎಂಬುದು ವಿಶೇಷವಾಗಿದೆ. ಈ ಕುರಿತ ವೀಡಿಯೋ ತುಣುಕನ್ನು ಕಾಂಗ್ರೆಸ್ ಸಹ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.