ಕಾಬೂಲ್: ಇಸ್ಲಾಮಿಕ್ ಎಮಿರೇಟ್ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಫ್ಘಾನಿಸ್ತಾನದಲ್ಲಿ ಮಹಿಳಾ ಚಾಲಿತ ರೇಡಿಯೊ ಕೇಂದ್ರವನ್ನು ಬಂದ್ ಮಾಡಲಾಗಿದೆ.
ವರದಿಗಳ ಪ್ರಕಾರ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಡಿಯೊ ಸ್ಟೇಷನ್ ‘ಸದಾಯ್ ಬನೋವನ್’ ಅನ್ನು ಬಂದ್ ಮಾಡಲಾಗಿದೆ. ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಸಾಕಷ್ಟು ಭಾರಿ ಸಂಗೀತಗಳನ್ನು ಪ್ರಸಾರ ಮಾಡಿದ ಕಾರಣಕ್ಕಾಗಿ ರೇಡಿಯೋ ಸ್ಟೇಷನ್ ಮುಚ್ಚಲಾಗಿದೆ.
ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ. ಈ ಉಲ್ಲಂಘನೆಯ ಕಾರಣದಿಂದ ರೇಡಿಯೋ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ತಿಳಿಸಿದ್ದಾರೆ.
ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿ ನೀಡುತ್ತೇವೆ ಎಂದು ಅಹ್ಮದಿ ಹೇಳಿದ್ದಾರೆ.