ಬೆಂಗಳೂರು: ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇವಿಎಂ, ಇಡಿ, ಸಿಬಿಐ, ಐಟಿ ದುರ್ಬಳಕೆ ಆಗಬಾರದು. ಇದನ್ನು ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ತಾರೀಖು ನಿಗದಿಯಾಗಿದೆ. ಮೇ 10 ಚುನಾವಣೆ ದಿನಾಂಕ ನಿಗದಿಯಾಗಿದೆ. ಮತ ಎಣಿಕೆಗೆ ಬಹಳ ಅಂತರ ಕೊಡದೇ ಒಂದೇ ಹಂತದಲ್ಲಿ ಮಾಡುವುದು ಒಳ್ಳೆಯ ನಿರ್ಣಯ.
ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹಳಷ್ಟು ಅನುಕೂಲವಾಗಲಿದೆ. ಚಿಲುಮೆ ವೋಟಿಂಗ್ ಲಿಸ್ಟ್ನಲ್ಲಿ ಹೆಚ್ಚೂ ಕಡಿಮೆ ಆಗುವುದು ನೋಡ್ತಾ ಇದ್ದೇವೆ. ಬಿಜೆಪಿಯವರು ಹೆಚ್ಚಿನ ಅಂಶ ವೋಟರ್ ಡಿಲೀಟ್ ಮಾಡಿಸಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತು ಹಾಕ್ತೀವಿ ಅಂತ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಅಶೋಕ್ ತಮ್ಮ ಬುಡ ಗಟ್ಟಿ ಇದೆಯಾ ನೋಡಿಕೊಳ್ಳಲಿ. ಬಿಜೆಪಿಯವರಿಗೆ ಹಸು ಮೇಯಿಸೋಕೆ ಹುಲ್ಲು ಸಿಗದಂತಾಗಿದೆ ಎಂದು ಹೇಳಿದರು.