ದಾವಣಗೆರೆ:- ಜಾತಿಗಣತಿ ಕುರಿತು ಎಚ್.ಕಾಂತರಾಜ ಆಯೋಗದ ವರದಿ ಜಾರಿಗೆ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿಗಣತಿ ಕುರಿತು ಎಚ್.ಕಾಂತರಾಜ ಆಯೋಗದ ವರದಿ ಜಾರಿಗೆ ಬಹಳ ವರ್ಷಗಳಿಂದ ಒತ್ತಾಯ ಇದೆ. ಸರ್ಕಾರ ವರದಿಯನ್ನು ಈಗಾಗಲೇ ಸ್ವೀಕರಿಸಿಯಾಗಿದೆ. ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ವರದಿಯನ್ನು ಮಂಡಿಸಿ ಚರ್ಚೆ ನಡೆಸುತ್ತೇನೆ ಎಂದರು.
ನಾವು ಜಾತಿ ಜನಗಣತಿ ಪರ ಇದ್ದೇವೆ. ಜಾತಿ ಆಧಾರದ ಮೇಲೇ ಬಡವರನ್ನು, ಶೋಷಿತರನ್ನು ಗುರುತಿಸುವ ಕೆಲಸವಾಗುತ್ತದೆ. ಅದರ ಆಧಾರದ ಮೇಲೇ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಸಮಾಜದಲ್ಲಿ ಸಮಾನತೆ ತರಲು ಇದೆಲ್ಲ ಅವಶ್ಯ. ಹೀಗಾಗಿ ಕಾಂತರಾಜ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ’ ಎಂದು ಭರವಸೆ ನೀಡಿದರು.