ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ಪ್ರಕಟವಾಗಿದ್ದು, ಇದೇ ಮೇ.10ರಂದು ಮತದಾನ ನಡೆಯಲಿದೆ. ಇನ್ನು ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಏಪ್ರಿಲ್ 19ರಂದು ನಾಮಪತ್ರ (Nomination) ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ಹೌದು…ಇಂದು(ಏಪ್ರಿಲ್ 03) ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಏಪ್ರಿಲ್ 19ರಂದು ನಾನು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಹಾಗೇ ಏಪ್ರಿಲ್ 20 ಹಾಗೂ 21ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣ ಕ್ಷೇತ್ರದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ. ರಾಮನಗರ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ನಿಮ್ಮ ಮನೆ ಮಗನನ್ನ ಬಿಟ್ಟು ಬೇರೆ ಯಾರೂ ಸಿಎಂ ಆಗುವುದಕ್ಕೆ ಆಗಲ್ಲ ಎಂದು ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಪಂಚರತ್ನ ರತಯಾತ್ರೆ ಯಶಸ್ವಿಯಾಗಿದ್ದು, ಎಲ್ಲಾ ಭಾಗದಲ್ಲೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಕೆಲ ಭಿನ್ನಾಭಿಪ್ರಾಯ ಇರಬಹುದು. ಅದನ್ನ ಕೂತು ಮಾತನಾಡಿ ಸರಿಪಡಿಸಿಕೊಳ್ಳಬಹುದು. ನನಗೆ ಸಂಪೂರ್ಣ ವಿಶ್ವಾಸ ಇದೆ. ಈ ಬಾರಿಯೂ ಗೆಲ್ಲುತ್ತೇವೆ. ಆದರೆ ಕೆಲವರು ಆತಂಕ ವ್ಯಕ್ತಪಡಿಸಿದ್ರು. ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂದರು. ಆದರೆ ಅವರಿಗೆ ನಾನು ಒಂದೇ ಮಾತು ಹೇಳಿದ್ದೇನೆ. ಈ ಬಾರಿ ನಾನು ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಎಂದು. ಚನ್ನಪಟ್ಟಣದಲ್ಲಿ ನಮ್ಮ ಶಕ್ತಿ ದೊಡ್ಡಮಟ್ಟದಲ್ಲಿದೆ. ಚನ್ನಪಟ್ಟಣಕ್ಕೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದರು.
ಮೈತ್ರಿ ಸರ್ಕಾರದಲ್ಲಿ ದೊಡ್ಡ ದೊಡ್ಡ ಸವಾಲುಗಳಿದ್ದವು. ರೈತರ ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಒತ್ತಡದ ನಡುವೆಯೂ ಉತ್ತಮ ಆಡಳಿತ ಕೊಟ್ಟಿದ್ದೆ, ಆಗ ಚನ್ನಪಟ್ಟಣದ ಕಡೆ ಗಮನಕೊಡುತ್ತಿಲ್ಲ ಎಂಬ ಅಪಪ್ರಚಾರ ಮಾಡಿದ್ರು. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು ಸರ್ಕಾರ ತೆಗೆದ್ರು ಎಂದು ಪರೋಕ್ಷವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಈಗ ಫ್ರೀ ಪೋಲ್ ಸರ್ವೆಗಳು ನಡೆಯುತ್ತಿವೆ. ದುಡ್ಡು ಕೊಟ್ರೆ ಜೆಡಿಎಸ್ ಗೆ 200 ಸೀಟ್ ಬರುತ್ತೆ ಅಂತಾನೂ ತೋರಿಸುತ್ತಾರೆ. ಹಾಗಾಗಿ ಈ ಫ್ರೀ ಪೋಲ್ ಸರ್ವೆಗಳ ಬಗ್ಗೆ ತಲೆಕಡೆಸಿಕೊಳ್ಳಲ್ಲ. ಕ್ಷೇತ್ರಕ್ಕೆ ಹೆಚ್ವು ಅನುದಾನ ತಂದಿದ್ದೇನೆ ಅಂತ ಕೆಲವರು ಓಡಾಡ್ತಿದ್ದಾರೆ. ಆದರೆ ನನ್ನ ಹೆಸರು ಹೇಳಿಕೊಂಡೇ ಅನುದಾನ ತರಬೇಕು, ಇಲ್ಲಿ ಕುಮಾರಸ್ವಾಮಿ ಸೋಲಿಸುತ್ತೇನ ಎಂದು ದುಡ್ಡು ತರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಈ ವ್ಯಕ್ತಿಗಳು ಎಲ್ಲಿದ್ದರು? ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಬರುವುದು. ನನಗೆ ಇನ್ನೊಂದು ವರ್ಷ ಅಧಿಕಾರ ಇದ್ದಿದ್ರೆ ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದೆ. ನನ್ನ ಅಧಿಕಾರ ತೆಗೆದವರು ಇವರೇ. ಈಗ ಕೆಲಸ ಮಾಡಿಲ್ಲ ಎಂದು ಹೇಳುತ್ತಿರುವುದು ಇವರೇ ಎಂದು ಹೆಸರು ಹೇಳದೇ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
2018ರ ರೀತಿಯಲ್ಲಿ ಈ ಚುನಾವಣೆ ನಡೆಸಿಕೊಡಿ. ನೀವೇ ಮುಂದೆ ನಿಂತು ಚುನಾವಣೆ ನಡೆಸಿ. ನನ್ನನ್ನ ನೀವು ರಕ್ಷಣೆ ಮಾಡಿದ್ರೆ, ರಾಜ್ಯದ ಬಡವರನ್ನ ನಾನು ರಕ್ಷಣೆ ಮಾಡುತ್ತೇನೆ. ಈ ಬಾರಿ ನನಗೆ ಶಕ್ತಿ ನೀಡಿ ಎಂದು ಕುಮಾರಸ್ವಾಮಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು. ಅಲ್ಲದೇ ಚುನಾವಣಾ ಜವಾಬ್ದಾರಿಯನ್ನ ಕ್ಷೇತ್ರದ ಕಾರ್ಯಕರ್ತರಿಗೆ ವಹಿಸಿದರು.