ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ಮದಗಜರಾಜ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಶಾಲ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನಾರೋಗ್ಯದಿಂದ ಗುರುತು ಸಿಗದಂತೆ ವಿಶಾಲ್ ಬದಲಾಗಿದ್ದರು. ವೇದಿಕೆಯಲ್ಲೂ ನಡುಗುತ್ತಲೇ ಮಾತನಾಡಿದ ವಿಶಾಲ್ ಕಂಡ ಫ್ಯಾನ್ಸ್ ಕಂಗಾಲಾಗಿದ್ದರು. ಮೂಲಗಳ ಪ್ರಕಾರ ವಿಶಾಲ್ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಮದಗಜರಾಜ ಸಿನಿಮಾ ಕಾರ್ಯಕ್ರಮ ಮುಗಿದ ತಕ್ಷಣ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಬೆನ್ನಲ್ಲೇ ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ವಿಶಾಲ್ರ ಇತ್ತೀಚಿನ ವೀಡಿಯೊಗಳು ಮತ್ತು ಫೋಟೋಗಳು ಟ್ರೆಂಡಿಂಗ್ ಆಗಿವೆ. ಇದನ್ನು ನೋಡಿದವರೆಲ್ಲರೂ ವಿಶಾಲ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ವಿಶಾಲ್ ಅಭಿನಯದ ಮದಗಜರಾಜ ಚಿತ್ರ ಇದೀಗ ಸಂಕ್ರಾಂತಿ ಸಂದರ್ಭದಲ್ಲಿ ಅಂದರೆ ಜ.12ರಂದು ರಿಲೀಸ್ ಆಗಲಿದೆ.