ಬೀದರ್: ಔರಾದ್ (Aurad) ಕ್ಷೇತ್ರದಲ್ಲಿ ಜೆಡಿಎಸ್ (JDS) ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದ್ದಾಗ ಪ್ರಭು ಚವ್ಹಾಣ್ (Prabhu Chauhan) ಬೆಂಬಲಿಗರು ಜೆಡಿಎಸ್ ಪಕ್ಷದ ಶಾಲು ಸುಟ್ಟು ಹಾಕಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಔರಾದ್ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜೈಸಿಂಗ್ ರಾಠೋಡ್ (Jaisingh Rathod) ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೀದರ್ನಲ್ಲಿ (Bidar) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ ಕ್ಷೇತ್ರದಲ್ಲಿ ಪಂಚರತ್ನ ಯೋಜನೆ ಜಾಗೃತಿ ಮೂಡಿಸುತ್ತಿದ್ದು, ಈ ವೇಳೆ ಮಾಳೆಗಾಂವ್ ತಾಂಡಕ್ಕೆ ಹೋದಾಗ ಪ್ರಭು ಚವ್ಹಾಣ್ ಬೆಂಬಲಿಗರು ಮೋದಿ ಮೋದಿ (Narendra Modi) ಎಂದು ಕೂಗಿದ್ದಾರೆ ಎಂದು ಹೇಳಿದರು.
ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಲ್ಲೆ ಮಾಡಲು ಮುಂದಾದಾಗ ನಾವು ಅಲ್ಲಿಂದ ಬೇರೆ ಗ್ರಾಮಕ್ಕೆ ಹೋದೆವು. ನಾವು ಗ್ರಾಮದಿಂದ ಹೋದ ಬಳಿಕ ಬಿಜೆಪಿ (BJP) ಕಾರ್ಯಕರ್ತರು ಜೆಡಿಎಸ್ ಪಕ್ಷದ ಶಾಲುಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೇ ಜೆಡಿಎಸ್ ಶಾಲುಗಳನ್ನು ಸುಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದರು.
ಈ ವೀಡಿಯೋಗಳನ್ನು ಚವ್ಹಾಣ್ ಬೆಂಬಲಿಗರು ನಮಗೂ ಕಳಿಸಿದ್ದಾರೆ. ಆದರೆ ಈ ಬಗ್ಗೆ ಕೇಸ್ ಮಾಡಲು ಹೋದರೆ ನಾಳೆ, ನಾಡಿದ್ದು ಎಂದು ಪೊಲೀಸರು ತಿರುಗಿಸಿದ್ದಾರೆ ಎಂದು ಪ್ರಭು ಚವ್ಹಾಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.