ಸಿಯೋಲ್: ದೋಷಾರೋಪಣೆಗೊಳಗಾದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಬಂಧನವನ್ನು ಭದ್ರತಾ ಸಿಬ್ಬಂದಿ ತಡೆದಿರುವ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಭದ್ರತಾ ಸೇವೆ(ಪಿಎಸ್ಎಸ್) ಮುಖ್ಯಸ್ಥ ಪಾರ್ಕ್ ಚೊಂಗ್ ಜುನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪೊಲೀಸ್ ವಿಚಾರಣೆಗೆ ಹಾಜರಾದ ಬಳಿಕ ಅಧ್ಯಕ್ಷರ ಭದ್ರತಾ ಸೇವಾ ಮುಖ್ಯಸ್ಥ ಪಾರ್ಕ್ ಚೊಂಗ್-ಜುನ್ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ಉಸ್ತುವಾರಿ ಅಧ್ಯಕ್ಷ ಚೊಯ್ ಸಾಂಗ್-ಮೊಕ್ ಅಂಗೀಕರಿಸಿದ್ದಾರೆ ಎಂದು ಪಿಎಸ್ಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕೊರಿಯನ್ ನ್ಯಾಷನಲ್ ಪೊಲೀಸ್ ಏಜೆನ್ಸಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ್ದ ಪಾರ್ಕ್ ` ಸರ್ಕಾರಿ ಏಜೆನ್ಸಿಗಳು ಪರಸ್ಪರ ಮುಖಾಮುಖಿ ಆಗುವಂತಹ ಪರಿಸ್ಥಿತಿಯ(ಪೊಲೀಸ್ ಹಾಗೂ ಅಧ್ಯಕ್ಷೀಯ ಭದ್ರತಾ ಪಡೆ) ಬಗ್ಗೆ ಹಲವು ನಾಗರಿಕರು ಆತಂಕಗೊಂಡಿದ್ದಾರೆ. ಆದರೆ ಯಾವುದೇ ಸಂದರ್ಭದಲ್ಲೂ ದೈಹಿಕ ಘರ್ಷಣೆ ಅಥವಾ ರಕ್ತಪಾತ ನಡೆಯುವುದಿಲ್ಲ ಎಂಬ ವಿಶ್ವಾಸವಿದೆ’ ಎಂದಿದ್ದರು.
ಈ ಮಧ್ಯೆ, ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಲು ಪ್ರಯತ್ನಿಸಿದ ಆರೋಪದಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಅಧ್ಯಕ್ಷ ಯೂನ್ ಸುಕ್ ಅವರನ್ನು ಬಂಧಿಸಲು ಹೊಸ ವಾರಂಟ್ ಪಡೆದುಕೊಂಡಿರುವ ತನಿಖಾಧಿಕಾರಿಗಳು ಹಾಗೂ ಪೊಲೀಸರು ಯೂನ್ ಸುಕ್ರನ್ನು ಬಂಧಿಸಲು ಮತ್ತೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ.