ಬೆಂಗಳೂರು:- ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ. ಭವಿಷ್ಯದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಬಹುದೆಂಬ ಆತಂಕದಿಂದ ಶಸ್ತ್ರಾಸ್ತ್ರಗಳನ್ನು ಅವರು ಕಾಡಿನಲ್ಲೇ ಅಡಗಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ.
ಇನ್ನೂ ಕರ್ನಾಟಕದಲ್ಲಿ ಆರು ಜನ ನಕ್ಸಲರು ಶರಣಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲಿಸಂಗೆ ಕಡಿವಾಣ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಮೋಸ್ಟ್ ವಾಂಟೆಡ್ ನಕ್ಸಲರು ಶರಣಾಗತರಾದರೂ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಎಲ್ಲಿ ಇಟ್ಟಿದ್ದಾರೆ. ಶರಣಾಗುವಾಗ ಯಾವ ಕಾರಣಕ್ಕೆ ಶಸ್ತ್ರಾಸ್ತ್ರ ಸಲ್ಲಿಕೆ ಮಾಡಿಲ್ಲ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಹ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಲೇ ಇದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ, ನಕ್ಸಲರ ಶಸ್ತ್ರಾಸ್ತ್ರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶಸ್ತ್ರಾಸ್ತ್ರ ಎಲ್ಲಿದೆ ಎಂದು ಗೊತ್ತಿದೆ, ಮಹಜರು ಮಾಡಿ ತರುತ್ತಾರೆ. ಕರ್ನಾಟಕದಲ್ಲಿ ನಕ್ಸಲಿಸಂ ಇರಬಾರದು ಎಂಬುದು ನಮ್ಮ ಉದ್ದೇಶ. ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಯಬಾರದೆಂಬುದು ಉದ್ದೇಶ. ಮತ್ತೊಬ್ಬ ನಕ್ಸಲ್ ಇದ್ದಾನೋ ಇಲ್ಲವೋ ನಮಗೆ ಮಾಹಿತಿಯಿಲ್ಲ. ಮುಖ್ಯವಾಹಿನಿಗೆ ಬರುವಂತೆ ಆತನಿಗೂ ನಾನು ಮನವಿ ಮಾಡುತ್ತೇನೆ ಎಂದರು.