ಮಾತಿನ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದ ಚೈತ್ರಾ ಕುಂದಾಪುರ ಈ ವಾರ ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಅವರು ಡೇಂಜರ್ ಝೋನ್ಗೆ ಬಂದಿದ್ದರು. ಈ ವೇಳೆ ಮೋಕ್ಷಿತಾ ಅವರು ಮೊದಲು ಸೇಫ್ ಆದರು. ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ನಡುವೆ ಯಾರು ಔಟ್ ಆಗಬಹುದು ಎಂದ ಕೌತುಕ ಮೂಡಿತು. ಅಂತಿಮವಾಗಿ ಚೈತ್ರಾ ಅವರ ಆಟ ಇಲ್ಲಿಗೆ ಮುಗಿಯಿತು ಎಂದು ಹೇಳಲಾಯಿತು. ಈ ವೇಳೆ ಭಾವುಕರಾದ ಚೈತ್ರಾ ನೋವಿನಿಂದಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು.
ಎಲಿಮಿನೇಷನ್ ಪ್ರಕ್ರಿಯೆ ನಡೆಯುವಾಗ ‘ಬಿಗ್ ಬಾಸ್ ಮನೆಯಲ್ಲಿ ಒಂದು ಲಕೋಟೆ ಇರಲಿದೆ. ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ’ ಎಂದು ಸುದೀಪ್ ಹೇಳಿದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರೇ ಸೇಫ್ ಆದರು!
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ತಪ್ಪುಗಳನ್ನು ಮಾಡುತಲೇ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿ ಬಂದಿದ್ದಾಗ ಹೊರ ಜಗತ್ತಿನ ವಿಷಯಗಳನ್ನೆಲ್ಲ ಅವರು ಬಿಗ್ ಬಾಸ್ ಮನೆಯ ಒಳಗೆ ಹೇಳಿದ್ದರು. ಆಗ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಅದಕ್ಕೂ ಮುನ್ನ ‘ನಿನ್ನ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಚೈತ್ರಾ ಬೈಯ್ದಿದ್ದರು. ಆಗ ಕೂಡ ಕಿಚ್ಚ ಬುದ್ಧಿ ಹೇಳಿದ್ದರು. ಸುದೀಪ್ ಬುದ್ಧಿ ಹೇಳಿದ ಮೇಲೆ ಕೂಡ ಚೈತ್ರಾ ಅವರು ತಮ್ಮದೇ ಸರಿ ಎಂಬಂತೆ ಬಿಗ್ ಬಾಸ್ ಮನೆಯ ಒಳಗೆ ಕುಳಿತು ಮಾತನಾಡಿದ್ದರು.
ಪ್ರತಿ ಬಾರಿ ನಾಮಿನೇಷನ್ನಿಂದ ಸೇಫ್ ಆದಾಗ ‘ಮತ್ತೆ ಈ ಡೇಂಜರ್ ಜೋನ್ಗೆ ಬರುವುದಿಲ್ಲ. ಚೆನ್ನಾಗಿ ಆಡುತ್ತೇನೆ’ ಎಂದೆಲ್ಲ ಹೇಳುತ್ತಿದ್ದರು. ಆದ್ರೆ ಚೈತ್ರಾ ಆಟಕ್ಕೆ ಈ ವಾರ ತೆರೆ ಬಿದ್ದಿದೆ. ಕೊನೇ ವಾರದಲ್ಲಿ ಮಾತ್ರ ಅವರಿಗೆ ಎಲ್ಲರಿಂದ ‘ಉತ್ತಮ’ ಪಟ್ಟ ಸಿಕ್ಕರು ಕ್ಯಾಪ್ಟನ್ ಆಗಲು ಸಾಧ್ಯವಾಗಲಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಸಿಗಲಿಲ್ಲ. ಆ ಬೇಸರದಲ್ಲೇ ಅವರು ಬಿಗ್ ಬಾಸ್ ಆಟವನ್ನು ಅಂತ್ಯಗೊಳಿಸಿದ್ದಾರೆ. ಚೈತ್ರಾ ಕುಂದಾಪುರ ಕಿಚ್ಚ ಸುದೀಪ್ ಮುಂದೆ ಕಣ್ಣೀರು ಹಾಕಿದ್ದು, ಬಿಗ್ಬಾಸ್ನಲ್ಲಿ ಸಾರ್ಥಕವಾಗಿ ಬದುಕಿದ್ದೇನೆ ಎಂದಿದ್ದಾರೆ.