ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪೋಟಕ ಅರ್ಧಶತಕಗಳನ್ನು ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 8 ವಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ಮೂರು ವರ್ಷಗಳ ಬಳಿಕ ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2023ರ ಐಪಿಎಲ್ ಟೂರ್ನಿಯ ತನ್ನ ಮೊದಲನೇ ಪಮದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ತೋರಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಘಾತದ ಹೊರತಾಗಿಯೂ ತಿಲಕ್ ವರ್ಮಾ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 171 ರನ್ ಗಳಿಸಿತು.
ಬಳಿಕ 172 ರನ್ ಗುರಿ ಹಿಂಬಾಲಿಸಿದ ಆರ್ಸಿಬಿ ತಂಡಕ್ಕೆ ಪಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆರಂಭ ತಂದುಕೊಟ್ಟರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 14.5 ಓವರ್ಗಳಿಗೆ 148 ರನ್ ಗಳಿಸಿತು. ಆ ಮೂಲಕ ಆರ್ಸಿಬಿಗೆ ಭರ್ಜರಿ ಆರಂಭ ತಂದುಕೊಟ್ಟಿತ್ತು. ತಂಡವನ್ನು ಬಹುಬೇಗ ಗೆಲುವಿನ ದಡ ಮುಟ್ಟಿಸುವ ಭರದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಫಾಫ್ ಡು ಪ್ಲೆಸಿಸ್ ವಿಕೆಟ್ ಒಪ್ಪಿಸಿದರು.
ಆದರೆ, ಫಾಫ್ ಡು ಪ್ಲೆಸಿಸ್ ಆರಂಭದಿಂದಲೂ ಮುಂಬೈ ಬೌಲರ್ಗಳನ್ನು ಬಲವಾಗಿ ದಂಡಿಸಿದ್ದರು, ಎದರಿಸಿದ 43 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 73 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡಿದ್ದ ವಿರಾಟ್ ಕೊಹ್ಲಿ ಕೂಡ ಬ್ಯಾಟಿಂಗ್ ಅಬ್ಬರ ನಡೆಸಿದರು. ಕೇವಲ 49ಎಸೆತಗಳಲ್ಲಿ ವಿರಾಟ್ ಕೊಹ್ಲಿ, 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 82 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ಸಿಬಿ ತಂಡ ಗೆಲುವು ಪಡೆಯುತ್ತಿದ್ದಂತೆ ಟ್ವಿಟರ್ನಲ್ಲಿ ಅಭಿಮಾನಿಗಳು ಕೊಹ್ಲಿ ಹಾಗೂ ಡು ಪ್ಲೆಸಿಸ್ ಜೋಡಿಯನ್ನು ಶ್ಲಾಘಿಸಿದರು. ಮೊದಲು ವಿರಾಟ್ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಜೊತೆ ಫ್ರೆಂಡ್ಶಿಪ್ ಇತ್ತು. ಆದರೆ, ಇದೀಗ ವಿರಾಟ್ ಕೊಹ್ಲಿಗೆ ಫ್ರೆಂಡ್ಶಿಪ್ಗೆ ಇದೀಗ ಫಾಫ್ ಡು ಪ್ಲೆಸಿಸ್ ಸಿಕ್ಕಿದ್ದಾರೆಂದು ಗುಣಗಾಣ ಮಾಡಿದ್ದಾರೆ.
ಕಳೆದ ಒಂದು ದಶಕದಲ್ಲಿ ಆರ್ಸಿಬಿ ಪರ ಆಡಿದ್ದ ಎಬಿ ಡಿ ವಿಲಿಯರ್ಸ್ ಅವರು ವಿರಾಟ್ ಕೊಹ್ಲಿ ಸಾಕಷ್ಟು ಮ್ಯಾಚ್ ಇನಿಂಗ್ಸ್ಗಳನ್ನು ಆಡಿದ್ದಾರೆ. ಆ ಮೂಲಕ ಹಲವಾರು ಪಂದ್ಯಗಳನ್ನು ಆರ್ಸಿಬಿಗೆ ಗೆದ್ದುಕೊಟ್ಟಿದ್ದಾರೆ. ಅಂದಹಾಗೆ 2021ರ ಅಂತ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅವರು ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಎಬಿಡಿ ಮೆಂಟರ್ ಆಗಿ ಆರ್ಸಿಬಿ ತಂಡದಲ್ಲಿದ್ದಾರೆ.
ಈ ಪಂದ್ಯದ ಗೆಲುವಿನ ಮೂಲಕ ಆರ್ಸಿಬಿ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಖಾತೆ ತೆರೆದಿದೆ. ಎರಡು ಅಂಕಗಳನ್ನು ಕಲೆ ಹಾಕಿರುವ ಬೆಂಗಳೂರು ತಂಡ (+1.98) ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ 6 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತನ್ನ ಎರಡನೇ ಪಂದ್ಯವಾಡಲಿದೆ.