ಜನವರಿ 10ರಂದು ತೆರೆಕಂಡ ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೊದಲ ದಿನವೇ 186 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದರು. ಆದರೆ ಈ ಲೆಕ್ಕ ಸುಳ್ಳು ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದು ‘ಎಕ್ಸ್’ (ಟ್ವಿಟರ್) ಮೂಲಕ ಸರಣಿ ಪೋಸ್ಟ್ ಮಾಡಿದ್ದಾರೆ. ಈ ರೀತಿ ಮೋಸದ ಲೆಕ್ಕ ನೀಡಿದ್ದು ಯಾರು ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನಿಸಿದ್ದಾರೆ.
ರಾಮ್ ಚರಣ್ ಅಭಿನಯದ, ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾಗೆ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಚಿತ್ರದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಈ ಸಿನಿಮಾ ಜನವರಿ 10ರಂದು ಬರೋಬ್ಬರಿ 186 ಕೋಟಿ ರೂಪಾಯಿ ಗಳಿಸಿದೆ. ಒಂದು ವೇಳೆ ಅದು ನಿಜವೇ ಹೌದಾಗಿದ್ದರೆ, ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ 4ನೇ ಸಿನಿಮಾ ಇದಾಗಬೇಕಿತ್ತು. ಆದರೆ ಈ ಲೆಕ್ಕ ನಿಜವಾಗಿರಲು ಸಾಧ್ಯವೇ ಇಲ್ಲ ಎಂದು ರಾಮ್ ಗೋಪಾಲ್ ವರ್ಮಾ ಅವರು ಟೀಕಿಸಿದ್ದಾರೆ. ಚಿತ್ರದ ಬಜೆಟ್ ಬಗ್ಗೆಯೂ ಆರ್ಜಿವಿ ಅನುಮಾನ ವ್ಯಕ್ತಪಡಿಸಿದ್ದಾರೆ.
‘ಗೇಮ್ ಚೇಂಜರ್ ಸಿನಿಮಾದ ಬಜೆಟ್ 450 ಕೋಟಿ ಆಗಿದ್ದರೆ, ಆರ್ಆರ್ಆರ್ ಸಿನಿಮಾಗೆ 4500 ಕೋಟಿ ರೂಪಾಯಿ ಖರ್ಚಾಗಬೇಕಿತ್ತು. ಗೇಮ್ ಚೇಂಜರ್ ಸಿನಿಮಾದ ಮೊದಲ ದಿನದ ಕಲೆಕ್ಷನ್ 186 ಕೋಟಿ ಎಂಬುದಾದರೆ ‘ಪುಷ್ಪ 2’ ಚಿತ್ರದ ಮೊದಲ ದಿನದ ಕಲೆಕ್ಷನ್ 1860 ಕೋಟಿ ರೂಪಾಯಿ ಆಗಬೇಕಿತ್ತು’ ಎಂದು ರಾಮ್ ಗೋಪಾಲ್ ವರ್ಮಾ ಟೀಕಿಸಿದ್ದಾರೆ.
ನಿರ್ಮಾಪಕ ದಿಲ್ ರಾಜು ಅವರು ಈ ರೀತಿ ಸುಳ್ಳು ಲೆಕ್ಕ ನೀಡುವಂತಹ ವ್ಯಕ್ತಿ ಅಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಹಾಗಾದರೆ ಈ ಕೃತ್ಯದ ಹಿಂದೆ ಇರುವವರು ಯಾರು ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. ವರದಿಗಳ ಪ್ರಕಾರ, ‘ಗೇಮ್ ಚೇಂಜರ್’ ಸಿನಿಮಾ 4 ದಿನ ಕಳೆದರೂ ಭಾರತದ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಲ್ಲ.