‘ಬಿಗ್ ಬಾಸ್ ಕನ್ನಡ ಸೀಸನ್ 11’ ಫೀನಾಲೆ ಹಂತಕ್ಕೆ ಬಂದು ತಲುಪಿದ್ದು ಒಬ್ಬೊಬ್ಬರೆ ಮನೆಯಿಂದ ಹೊರ ಹೋಗುತ್ತಿದ್ದಾರೆ. ಈ ವಾರ ದೊಡ್ಮನೆಯಿಂದ ಗೌತಮಿ ಜಾದವ್ ಹೊರ ಬಂದಿದ್ದು ಈ ಬೆನ್ನಲ್ಲೇ ಧನರಾಜ್ ಕೂಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಿಂದ ಧನರಾಜ್ ಹೊರಗೆ ಬಂದಿದ್ದು ಈ ವೇಳೆ ಸಾಕಷ್ಟು ಎಮೋಷನಲ್ ಆದರು. ‘ಕಪ್ ಗೆಲ್ಲಲು ನಾನು ಸೋತಿರಬಹುದು. ಆದರೆ ಬದುಕಿನಲ್ಲಿ ಗೆಲ್ಲುತ್ತೇನೆ ಎಂಬ ಪಾಠವನ್ನು ಈ ಮನೆ ಕಲಿಸಿದೆ. ಈ ಅವಕಾಶಕ್ಕೆ ಧನ್ಯವಾದಳು. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಧನರಾಜ್ ಆಚಾರ್ ಹೇಳಿದರು. ಮನೆಯಿಂದ ಹೊರಗೆ ಬರುವಾಗ ತಮ್ಮ ಆಪ್ತರಿಗೆ ಅವರು ಕೊನೇ ಸಂದೇಶವನ್ನು ತಿಳಿಸಿದರು.
‘ಮೋಕ್ಷಿತಾ ನಿಮಗೆ ಪ್ರಾಮಾಣಿಕತೆ ಇದೆ. ಚೆನ್ನಾಗಿ ಆಡುತ್ತಿದ್ದೀರಿ’ ಎಂದು ಧನರಾಜ್ ಹೇಳಿದರು. ‘ನಾನು ಎಂದಿಗೂ ನಿನ್ನ ಜೊತೆಗೆ ಇರುತ್ತೇನೆ. ಚೆನ್ನಾಗಿ ಆಡು ದೋಸ್ತಾ’ ಎಂದು ಹನುಮಂತನಿಗೆ ಧನರಾಜ್ ಬೆನ್ನು ತಟ್ಟಿದರು. ‘ಮಂಜು ಅವರೇ ನೀವು ಸೈಲೆಂಟ್ ಆಗಿ ಇರಬಾರದು. ಎದುರು ಉತ್ತರ ನೀಡುವ ರೀತಿ ನಿಮ್ಮನ್ನು ನಾವು ನೋಡಬೇಕು’ ಎಂದು ಹುರಿದುಂಬಿಸಿದರು. ‘ನನ್ನನ್ನು ನಿಮ್ಮ ಎದುರಿನ ಸ್ಪರ್ಧಿ ಅಂತ ನೀವು ಪರಿಗಣಿಸಿದ್ದು ನನಗೆ ಹೆಮ್ಮೆ ಎನಿಸಿತು. ಹೊರಗೂ ನಮ್ಮ ಸ್ನೇಹ ಮುಂದುವರಿಯಲಿ’ ಎಂದು ರಜತ್ಗೆ ಧನರಾಜ್ ಹೇಳಿದರು.
‘ಇಲ್ಲಿಯವರೆಗೆ ಇದ್ದಿದ್ದು ನನಗೆ ಖುಷಿ ಇದೆ. ಈ ವೇದಿಕೆಯಲ್ಲಿ ನಿಮ್ಮ ಜೊತೆ ಮಾತನಾಡಿದ್ದು ನನ್ನ ಪುಣ್ಯ. ಹನುಮಂತ ನನ್ನ ಜೀವನ. ಅವನು ಶಕ್ತಿ ನೀಡಿದ್ದಾನೆ. ನಾವು ಖುಷಿಯಿಂದ ಆ ಮನೆಯಲ್ಲಿ ಜೀವಿಸಿದ್ದೇವೆ’ ಎಂದು ಸುದೀಪ್ ಎದುರಲ್ಲಿ ಹನುಮಂತ ಬಗ್ಗೆ ಧನರಾಜ್ ಹೇಳಿದರು. ಧನರಾಜ್ ಔಟ್ ಆಗಿದ್ದಕ್ಕೆ ಹನುಮಂತ ಕಣ್ಣೀರು ಹಾಕಿದರು.