ಜೆರುಸಲೇಂ: ಇಸ್ರೇಲ್ ಹಾಗೂ ಗಾಝಾದ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ 15 ತಿಂಗಳ ಬಳಿಕ ವಿರಾಮ ಘೋಷಿಸಲಾಗಿದೆ. ಗಾಝಾದಲ್ಲಿ 15 ತಿಂಗಳ ಯುದ್ಧವನ್ನು ನಿಲ್ಲಿಸಿದ ಕದನ ವಿರಾಮದ ಮೊದಲ ದಿನದಂದು ಇಸ್ರೇಲ್ 90 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದ್ದು, ಹಮಾಸ್ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
ನೆರವು ಕಾರ್ಯಚಾರಣೆಯ ಭಾಗವಾಗಿ 630ಕ್ಕೂ ಹೆಚ್ಚು ಟ್ರಕ್ ಗಳು ಗಾಝಾ ಪಟ್ಟಿಯನ್ನು ಪ್ರವೇಶಿಸಿದೆ. ಅದರಲ್ಲಿ ಕನಿಷ್ಠ 300 ಟ್ರಕ್ ಗಳು ಯುದ್ಧದ ಸಮಯದಲ್ಲಿ ಹೆಚ್ಚು ಪರಿಣಾಮ ಬೀರಿದ ಗಾಝಾದ ಪ್ರದೇಶಗಳಿಗೆ ತೆರಳಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ನ ಮೂವರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಕದನ ವಿರಾಮ ಜಾರಿಗೆ ಬಂದ ನಂತರ ನಿಟ್ಟುಸಿರು ಬಿಟ್ಟ ಗಾಝಾದ ಜನರು ಬಾಂಬ್ ದಾಳಿಯಿಂದ ನಾಶವಾದ ತಮ್ಮ ಮನೆಗಳ ಬಳಿ ತೆರಳಿ ಪರಿಶೀಲನೆ ನಡೆಸಿದ್ದು ಈ ವೇಳೆ ಹಲವರು ಕಣ್ಣೀರು ಹಾಕಿದ್ದಾರೆ.
ಇಸ್ರೇಲ್ ವೆಸ್ಟ್ ಬ್ಯಾಂಕ್ ಜೈಲಿನಿಂದ 90 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದ್ದು ಬಿಡುಗಡೆಗೊಂಡವರಲ್ಲಿ 62 ಮಹಿಳೆಯರು ಸೇರಿದ್ದಾರೆ. ಅವರಲ್ಲಿ ಓರ್ವ ಅಪ್ರಾಪ್ತ ಬಾಲಕಿ ಸೇರಿದ್ದಾಳೆ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.