ಪಾಕಿಸ್ತಾನದಲ್ಲಿ ರೈತರು ಚಳಿಗಾಲದ ಬರಗಾಲದಿಂದ ಕಂಗಲಾಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಬರಗಾಲ ನಾಶಪಡಿಸುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ವರ್ಷ ಪಾಕಿಸ್ತಾನದಲ್ಲಿ ಮಳೆಯ ಪ್ರಮಾಣ ಶೇ.40 ರಷ್ಟು ಕಡಿಮೆಯಾಗಿದೆ. ಪೂರ್ವ ಪಂಜಾಬ್ ಪ್ರಾಂತ್ಯದ ಕೃಷಿ ಕೇಂದ್ರದಲ್ಲಿ ಸೆಪ್ಟೆಂಬರ್ ಆರಂಭ ಮತ್ತು ಜನವರಿ ಮಧ್ಯದ ನಡುವೆ ಸಾಮಾನ್ಯಕ್ಕಿಂತ ಶೇ.42 ರಷ್ಟು ಕಡಿಮೆ ಮಳೆಯಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಹೇಳಿದೆ.
“ಮಳೆಯ ಕೊರತೆಯು ರೈತರ ಮೇಲೆ ಪ್ರಮುಖ ಆರ್ಥಿಕ ಪರಿಣಾಮ ಬೀರಿದೆ” ಎಂದು ಹಣ್ಣು ಮತ್ತು ತರಕಾರಿ ರಫ್ತುದಾರರ ಸಂಘದ ಪಂಜಾಬ್ ಅಧ್ಯಕ್ಷ ಮಲಿಕ್ ಅಸ್ಗರ್ ಎಎಫ್ಪಿಗೆ ತಿಳಿಸಿದರು.
“ನನ್ನ ಪ್ರದೇಶದಲ್ಲಿ ಆಲೂಗಡ್ಡೆ ಪ್ರಧಾನ ಆಹಾರವಾಗಿದೆ. ಈ ವರ್ಷ ಸರಾಸರಿ ತುಂಬಾ ಕಡಿಮೆಯಾಗಿದೆ. ಸಾಮಾನ್ಯವಾಗಿ ನಾವು ಎಕರೆಗೆ 100 ರಿಂದ 120 ಚೀಲಗಳನ್ನು ಸುಲಭವಾಗಿ ಪಡೆಯಬಹುದು. ಈ ಚಳಿಗಾಲದಲ್ಲಿ ನಾವು ಎಕರೆಗೆ ಸುಮಾರು 60 ಚೀಲಗಳನ್ನು ಮಾತ್ರ ಪಡೆದುಕೊಂಡಿದ್ದೇವೆ.” ಎಂದು ಮಲಿಕ್ ಹೇಳಿದ್ದಾರೆ.
ಪಾಕಿಸ್ತಾನದ ಜಿಡಿಪಿಗೆ ಸುಮಾರು ಕಾಲು ಭಾಗದಷ್ಟು ಕೊಡುಗೆ ನೀಡುವ ಕೃಷಿ ವಲಯ, ರಾಷ್ಟ್ರೀಯ ಕಾರ್ಮಿಕ ಬಲದ ಶೇಕಡಾ 37 ರಷ್ಟು ಜನರಿಗೆ ಉದ್ಯೋಗ ನೀಡಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
ಆದರೆ ಅನೇಕ ಸಣ್ಣ ರೈತರು “ಈಗಾಗಲೇ ಕೃಷಿಯನ್ನು ಬಿಟ್ಟುಕೊಡುತ್ತಿದ್ದಾರೆ” ಮತ್ತು ಬೇರೆಡೆ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಅಸ್ಗರ್ ಹೇಳಿದ್ದಾರೆ. “ಈ ಶುಷ್ಕ ಹವಾಮಾನದ ಪರಿಣಾಮವು ರೈತರ ಮೇಲೆ ಬಹಳ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದಿದ್ದಾರೆ.