ಹೊಟ್ಟೆ (Stomach) ನೋವು (Pain) ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಮಕ್ಕಳು ಆಗಾಗ ಹೊಟ್ಟೆ ನೋವಿನಿಂದ ಬಳಲ್ತಿರುತ್ತಾರೆ. ಮಕ್ಕಳಿಗೆ ಮಾತ್ರವಲ್ಲ ಮಹಿಳೆಯರಿಗೂ ಅನೇಕ ಕಾರಣಗಳಿಂದ ಹೊಟ್ಟೆ ನೋವು ಬರುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಬರುವುದು ಸಾಮಾನ್ಯ. ಪುರುಷರಿಗಿಂತ ಮಹಿಳೆ (woman) ಯರು ಹೆಚ್ಚು ಹೊಟ್ಟೆ ನೋವಿನಿಂದ ಬಳಲುತ್ತಾರೆ. ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಇದರಲ್ಲಿ ಕೆಲವೊಮ್ಮೆ ಸೌಮ್ಯವಾದ ನೋವು ಮತ್ತು ಕೆಲವೊಮ್ಮೆ ತೀವ್ರವಾದ ನೋವು ಉಂಟಾಗುತ್ತದೆ. ಗ್ಯಾಸ್, ಹೊಟ್ಟೆ ಉಬ್ಬರ, ಅತಿಯಾಗಿ ತಿನ್ನುವುದು, ಅತಿಸಾರ, ಹೊಟ್ಟೆಯಲ್ಲಿ ಸುಡುವ ಅನುಭವ ಇತ್ಯಾದಿಗಳಿಂದ ಸೌಮ್ಯವಾದ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ.
ಅನೇಕ ಬಾರಿ ಇದು ತಾನಾಗಿಯೇ ಗುಣವಾಗುತ್ತದೆ. ಮತ್ತೆ ಅನೇಕ ಬಾರಿ ಮನೆ ಮದ್ದಿನಿಂದ ಕಡಿಮೆಯಾಗುತ್ತದೆ. ಆದ್ರೆ ಕೆಲವೊಮ್ಮೆ ತೀವ್ರವಾದ ಹೊಟ್ಟೆ ನೋವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ. ಯಾವುದೇ ಮನೆ ಮದ್ದು ಇದಕ್ಕೆ ನಾಟುವುದಿಲ್ಲ. ಹೊಟ್ಟೆ ನೋವು ತಡೆಯಲಾರದೆ ಬಿದ್ದು ಉಳ್ಳಾಡುವವರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿಯಾಗುವುದು ಅನಿವಾರ್ಯವಾಗುತ್ತದೆ. ಇದಲ್ಲೆ ಮುಟ್ಟಿನ ಸಮಸ್ಯೆ, ಗರ್ಭಾವಸ್ಥೆ, ಅಂಡಾಶಯದಲ್ಲಿನ ಚೀಲಗಳ ಕಾರಣದಿಂದ ಇದು ಸಂಭವಿಸುತ್ತದೆ. ಮಹಿಳೆಯರಲ್ಲಿ ಕಾಡುವ ವಿಪರೀತ ಹೊಟ್ಟೆ ನೋವಿಗೆ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಮಹಿಳೆಯರಲ್ಲಿ ಕಾಡುವ ಹೊಟ್ಟೆ ನೋವಿಗೆ ಕಾರಣಗಳು :
ಅಜೀರ್ಣದಿಂದ ಹೊಟ್ಟೆ ನೋವು : ಕೆಲವೊಮ್ಮೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆಹಾರ ಸೇವನೆ ಮಾಡಿದ ನಂತ್ರ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇವು ಅಜೀರ್ಣದ ಲಕ್ಷಣವಾಗಿದೆ. ಅಜೀರ್ಣ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಹೊಟ್ಟೆಯ ಮೇಲ್ಭಾಗದಲ್ಲಿ ಉರಿ, ನೋವು ಅಥವಾ ಉಬ್ಬರ ಕಾಣಿಸಿಕೊಳ್ಳುತ್ತದೆ. ಊಟದ ನಂತ್ರ ವಾಕರಿಕೆ ಬಂದಂತೆ ಆಗುತ್ತದೆ. ಕೊಬ್ಬಿನ ಆಹಾರಗಳ ಸೇವನೆ, ಧೂಮಪಾನ, ಆತಂಕ, ಅತಿಯಾಗಿ ಆಹಾರ ಸೇವನೆ,ಆಗಾಗ ತಿನ್ನುವುದು, ಆಲ್ಕೋಹಾಲ್, ಚಾಕೊಲೇಟ್ ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದ್ರಿಂದಲೂ ಅಜೀರ್ಣ ಸಮಸ್ಯೆ ಕಾಡುತ್ತದೆ.
ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು : ಮಹಿಳೆಯರಿಗೆ ಪ್ರತಿ ತಿಂಗಳು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮುಟ್ಟು ಕಾರಣ. ಅನೇಕ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಹೊಟ್ಟೆ ಸೆಳೆತ ಕಾಣಿಸುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಇದ್ದರೆ, ಬಿಸಿನೀರಿನ ಚೀಲವನ್ನು ಹೊಟ್ಟೆ ಮೇಲೆ ಇಟ್ಟುಕೊಳ್ಳಿ. ಕೆಲ ಮನೆ ಮದ್ದಿನ ಮೂಲಕವೂ ನೀವು ಹೊಟ್ಟೆ ನೋವನ್ನು ಕಡಿಮೆ ಮಾಡಬಹುದು.
ಅಂಡಾಶಯದಲ್ಲಿ ಸಿಸ್ಟ್ : ಕೆಲವು ದಿನಗಳಿಂದ ನಿರಂತರವಾಗಿ ಹೊಟ್ಟೆ ನೋವು ಕಾಣಿಸಿಕೊಳ್ತಿದ್ದರೆ ಇದು ಅಂಡಾಶಯದಲ್ಲಿನ ಚೀಲದ ಕಾರಣದಿಂದಾಗಿರಬಹುದು. ಅನೇಕ ಚೀಲಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಕೆಲ ದಿನಗಳ ನಂತ್ರ ತಾನಾಗಿಯೇ ಸರಿಯಾಗುತ್ತದೆ. ಆದರೆ, ಅಂಡಾಶಯದಲ್ಲಿ ದೊಡ್ಡ ಚೀಲ ಇದ್ದರೆ, ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಒಂದು ಚೀಲ ಇದ್ದಾಗ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವು ಕಾಣಿಸುತ್ತದೆ. ಅದು ದೊಡ್ಡದಾದ್ರೆ ಭಾರವಾದ ಅನುಭವವಾಗುತ್ತದೆ. ಕೆಲವೊಮ್ಮೆ ಅಂಡಾಶಯದಲ್ಲಿನ ಚೀಲದಿಂದಾಗಿ ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ.
ಮಹಿಳೆಯರ ಹೊಟ್ಟೆ ನೋವಿಗೆ ಮೂತ್ರನಾಳದ ಸೋಂಕು ಕಾರಣ : ಮೂತ್ರನಾಳದ ಸೋಂಕು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ನೊರೆ ನೊರೆಯಾಗಿ ಮೂತ್ರ, ಹೊಟ್ಟೆ ನೋವು, ಜ್ವರ ಇತ್ಯಾದಿ ಸಮಸ್ಯೆ ಕಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಕೆಳ ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತವೆ. ಇದು ಹೆಚ್ಚಿನ ಒತ್ತಡ ಮತ್ತು ನೋವು ನೀಡುತ್ತದೆ.
ಪೆಲ್ವಿಕ್ ಉರಿಯೂತದಿಂದ ಹೊಟ್ಟೆ ನೋವು : ಪೆಲ್ವಿಕ್ ಉರಿಯೂತದ ಕಾಯಿಲೆಯು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಸೋಂಕು ಅಥವಾ ಉರಿಯೂತವಾಗಿದೆ. ಇದು ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ ಗಳು, ಗರ್ಭಾಶಯದ ಮೇಲೆ ಪರಿಣಾಮ ಬೀರುತ್ತದೆ. ಯೋನಿ ಅಥವಾ ಗರ್ಭಕಂಠದಿಂದ ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾಗಳು ಇತರ ಸಂತಾನೋತ್ಪತ್ತಿ ಅಂಗಗಳಿಗೆ ಹರಡಿದಾಗ ಪೆಲ್ವಿಕ್ ಉರಿಯೂತದ ಕಾಯಿಲೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಕರುಳಿನ ಚಲನೆ, ಹೊಟ್ಟೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
ಅತಿಯಾಗಿ ಆಹಾರ ಸೇವನೆ ಮಾಡುವುದ್ರಿಂದ ಹೊಟ್ಟೆ ನೋವು : ಒಂದೇ ಸಮಯದಲ್ಲಿ ಅತಿ ಹೆಚ್ಚು ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಒಂದೇ ಬಾರಿ ಅತಿಯಾಗಿ ಆಹಾರ ಸೇವನೆ ಮಾಡಿದ್ರೆ ಹೊಟ್ಟೆ ನೋವು ಉಂಟಾಗುತ್ತದೆ. ಕೆಲವೊಮ್ಮೆ ನಿದ್ರಾಹೀನತೆ ಕೂಡ ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತದೆ. ಊಟ ಮಾಡಿದ ತಕ್ಷಣ ಮಲಗಿದ್ರೂ ಹೊಟ್ಟೆ ನೋವು ಬರುತದೆ.