ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯಿಂದ ಇನ್ನೊಂದು ಫೇಕ್ ಸುದ್ದಿ ಹೊರಬಿದ್ದಿದೆ.
ಆಂತರಿಕ ಪ್ರಜಾಪ್ರಭುತ್ವ ಜೀವಂತವಾಗಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಬಿಜೆಪಿ ನಾಯಕತ್ವ ನಡೆಸುತ್ತಿದೆ. ಪ್ರಜಾತಂತ್ರವೆಂದರೆ ಏನೆಂದು ತಿಳಿಯದ ಗುಲಾಮಿ ಮನಸ್ಥಿತಿಯ ಕಾಂಗ್ರೆಸ್ ಸುಳ್ಳು ಸುದ್ದಿಯನ್ನು ಹರಡುವುದೇ ರಾಜಕೀಯ ಎಂದುಕೊಂಡಿದೆ’ ಎಂದು ಸಿ.ಟಿ ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.