ಹಾಸನ: ಮೊದಲ ಬಾರಿಗೆ ಬೇಲೂರು ಚೆನ್ನಕೇಶವ ಸನ್ನಿಧಿಯಲ್ಲಿ ಅರೆ ಮಿಲಿಟರಿ ಪಡೆಯ ಬಂದೋಬಸ್ತಿನಲ್ಲಿ ಕುರಾನ್ ಪಠಣ ಇಲ್ಲದೆ ರಥೋತ್ಸವ ಜರುಗಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮಂಗಳವಾರ ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ರಥೋತ್ಸವ ಜರುಗಿತು. ಚೆನ್ನಕೇಶವ ರಥೋತ್ಸವದಲ್ಲಿ ‘ಕುರಾನ್ ಪಠಣ’ ಮಾಡಬಾರದು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಧಾರ್ಮಿಕ ದತ್ತಿ ಇಲಾಖೆ ಕೂಡಾ ಅನುಮತಿ ನೀಡಿತ್ತು. ಆದರೆ, ಹಿಂದೂ ಕಾರ್ಯರ್ತರು ಅಡ್ಡಿ ಪಡೆಸಿದ್ದು, ಕುರಾನ್ ಪಠಣ ಸಾಧ್ಯವಾಗಿಲ್ಲ.
ಶ್ಲೋಕ ಹೇಳಲು ಅಡ್ಡಿ; ಜೈ ಶ್ರೀರಾಮ್… ನಾವೆಲ್ಲ ಹಿಂದೂ, ನಾವೆಲ್ಲ ಒಂದು
ಪ್ರತಿ ವರ್ಷದಂತೆ ಕುರಾನ್ ಪಠಣ ಮಾಡಲು ಬಂದಿದ್ದ, ದೊಡ್ಡ ಮೇದೂರು ಗ್ರಾಮದ ಸೈಯದ್ ಸಜಾದ್ ಭಾಷಾ ಖಾದ್ರಿ ಈ ಬಾರಿ ದೇವಸ್ಥಾನದ ಮುಂಭಾಗದ ಮೆಟ್ಟಿಲಿನ ಬಳಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಇಸ್ಲಾಂ ಧರ್ಮದ ರೀತಿಯಲ್ಲಿ ಶ್ಲೋಕ ಹೇಳಿ ನಮಸ್ಕರಿಸಿದ್ದು, ಕುರಾನ್ ಪಠಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೊಡ್ಡ ಮೇದೂರಿನ ಖಾಜಿ ಸಾಹೇಬರು ಶ್ಲೋಕ ಹೇಳಲು ಮುಂದಾದ ವೇಳೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ‘ಜೈ ಶ್ರೀರಾಮ್… ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಘೋಷಣೆಗಳನ್ನು ಕೂಗಿದರು.ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು.
ಪೊಲೀಸ್ ಬಿಸಿ ಬಂದೋಬಸ್ತ್
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ಲೋಕ ಹೇಳುವುದಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತದ ವಿರುದ್ಧ ಹಿಂದೂ ಸಂಘಟನೆಗಳು ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ಅನುಮತಿ ನೀಡಿದ್ದ ಹಾಸನ ಜಿಲ್ಲಾಧಿಕಾರಿ
ಚನ್ನಕೇಶ್ವರ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣಕ್ಕೆ ಅನುಮತಿ ನೀಡಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಅರ್ಚನಾ ಸೋಮವಾರ ತಡ ರಾತ್ರಿ ಹೇಳಿಕೆ ನೀಡಿದ್ದರು. ಇದಕ್ಕೆ ವಿರುದ್ಧವೆಂಬಂತೆ ಚನ್ನಕೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಕುರಾನ್ ಪಠಣಕ್ಕೆ ಅವಕಾಶ ಇಲ್ಲ ಕೇವಲ ದೇವರಿಗೆ ಸಲಾಂ ಆರತಿಯನ್ನು ಮಾಡಲು (ಮೆಟ್ಟಿಲ ಮೇಲೆ ಪ್ರಾರ್ಥನೆ ಮಾಡಿ ಪೂಜೆ ಮಾಡಲು) ಅವಕಾಶ ನೀಡಲಾಗುವುದು ಎಂದು ಹೇಳಿಕೆ ಕೊಟ್ಟಿದ್ದರು. ಈ ಗೊಂದಲದಲ್ಲಿಯೇ ಮಂಗಳವಾರ ರಥೋತ್ಸವ ನಡೆದಿದ್ದು, ಮುಸ್ಲಿಂ ಖಾದ್ರಿ ಅವರು ಶ್ಲೋಕ ಹೇಳಲು ಮುಂದಾದಾಗ ಹಿಂದೂ ಕಾರ್ಯಕರ್ತರು ಅಡ್ಡಿ ಪಡೆಸಿದ್ದಾರೆ.