ಒಟ್ಟಾವ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಕೆನಡಾ ಪ್ರಧಾನಿ ಜೆಸ್ಟಿನ್ ಟ್ರೂಡೊ ಮಾತುಕತೆ ನಡೆಸಿದ್ದಾರೆ. ಕೆನಡಾದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಟ್ರಂಪ್ ಸರ್ಕಾರ ವಿಧಿಸಿರುವ ಶೇಕಡ 25ರಷ್ಟು ಸುಂವನ್ನು ಕನಿಷ್ಠ 30 ದಿನಗಳವರೆಗೆ ತಡೆಹಿಡಿಯಲಾಗುತ್ತದೆ ಎಂಬ ವಿಶ್ವಾಸವನ್ನು ಟ್ರುಡೋ ವ್ಯಕ್ತಪಡಿಸಿದ್ದಾರೆ. ಅಂತೆಯೇ ಅಕ್ರಮ ವಲಸೆಗೆ ತಡೆ ಹಾಗೂ ಮಾದಕವಸ್ತು ಸಾಗಾಣಿಕೆ ತಡೆಗೆ ಉಭಯ ಮುಖಂಡರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಮೆರಿಕ ವಿಧಿಸಿರುವ ಸುಂಕಕ್ಕೆ ಪ್ರತೀಕಾರದ ಕ್ರಮವಾಗಿ ಕೆನಡಾ ಕೂಡಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಿದ್ದು, ಇದು ಮಂಗಳವಾರದಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಬಿಯರ್, ವೈನ್, ಗೃಹಬಳಕೆ ವಸ್ತುಗಳು ಮತ್ತು ಕ್ರೀಡಾ ಸಲಕರಣೆಗಳನ್ನು ಗುರಿ ಮಾಡಿ ಈ ಸುಂಕ ವಿಧಿಸಲಾಗಿದೆ.
“ಗಡಿಭದ್ರತೆಗಾಗಿ ಹೊಸ ಹೆಲಿಕಾಪ್ಟರ್ಗಳು, ತಂತ್ರಜ್ಞಾನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ಅಮೆರಿಕದ ಪಾಲುದಾರರ ಜತೆ ಸಮನ್ವಯವನ್ನು ಹೆಚ್ಚಿಸುವ 130 ಕೋಟಿ ಡಾಲರ್ ವೆಚ್ಚದ ಯೋಜನೆಯನ್ನು ಕೆನಡಾ ಜಾರಿಗೊಳಿಸಲಿದೆ ಹಾಗೂ ಅಕ್ರಮ ನುಸುಳುಕೋರರಿಂದ ಹಾಗೂ ಮಾದಕವಸ್ತು ಸಾಗಾಣಿಕೆದಾರರಿಂದ ಗಡಿರಕ್ಷಣೆಗೆ ಸಂಪನ್ಮೂಲ ಹೆಚ್ಚಿಸಲಾಗುತ್ತದೆ. ಸುಮಾರು 10 ಸಾವಿರ ಮಂದಿ ಮುನ್ಪಡೆ ಸಿಬ್ಬಂದಿ ಗಡಿ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಟ್ರೂಡೊ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.