ವಾಷಿಂಗ್ ಟನ್: ಅಮೆರಿಕ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ರಾಷ್ಟ್ರಗಳಿಗೆ ತಾವೂ ಪ್ರತೀಕಾರ ಸುಂಕ ವಿಧಿಸುವುದಾಗಿ ಹೇಳಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾತಿನಂತೆ ಚೀನಾ, ಮೆಕ್ಸಿಕೋ, ಕೆನಡಾಗಳ ಕೆಲವು ಉತ್ಪನ್ನಗಳಿಗೆ ತೆರಿಗೆ ಹೆಚ್ಚಿಸಿದ್ದರು. ಆದ್ರೆ ತೆರಿಗೆ ಹೆಚ್ಚಿಸಿದ ಕೆಲವೇ ದಿನಗಳಲ್ಲಿ ಅದನ್ನೂ ವಾಪಸ್ ಪಡೆದುಕೊಂಡಿದ್ದಾರೆ.
ಅಮೆರಿಕಾ ತೆರಿಗೆ ಹೆಚ್ಚಳ ಮಾಡುತ್ತಿದ್ದಂತೆ ಚೀನಾ ಪ್ರತಿಕಾರಕ್ಕೆ ಮುಂದಾಗಿತ್ತು. ಚೀನಾ ಅಮೇರಿಕಾಗೆ ಸೆಡ್ಡು ಹೊಡೆದಿದ್ದು ಪ್ರತೀಕಾರ ಸುಂಕ ವಿಧಿಸಿದ್ದು ಅಮೇರಿಕಾಗೆ ಇದರ ಬಿಸಿ ತಟ್ಟಿದೆ. ಪರಿಣಾಮವಾಗಿ ಎಚ್ಚೆತ್ತುಕೊಂಡಿರುವ ಡೊನಾಲ್ಡ್ ಟ್ರಂಪ್ ಈಗ ಕೆನಡಾ, ಮೆಕ್ಸಿಕೋ ಜೊತೆಗೆ ಮಾತುಕತೆ ನಡೆಸಿ ಈ ಹಿಂದೆ ತಾವು ಈ ರಾಷ್ಟ್ರಗಳಿಗೆ ವಿಧಿಸಿದ್ದ ತೆರಿಗೆ ಏರಿಕೆಯನ್ನು ತಾತ್ಕಾಲಿಕವಾಗಿ (30 ದಿನಗಳವರೆಗೆ) ತಡೆಹಿಡಿದಿದ್ದಾರೆ.
ಕೆನಡಾ, ಮೆಕ್ಸಿಕೋಗಳು ವ್ಯಾಪಾರ ಮತ್ತು ಭದ್ರತೆಯ ಕುರಿತು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಪರಿಗಣಿಸಿ ಟ್ರಂಫ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕೆನಡಾ, ಮೆಕ್ಸಿಕೋ ರಾಷ್ಟ್ರಗಳ ನಾಯಕರ ನಡುವಿನ ಸುದೀರ್ಘ ದೂರವಾಣಿ ಸಂಭಾಷಣೆಯ ನಂತರ, ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಯುಎಸ್-ಮೆಕ್ಸಿಕೋ ಗಡಿಗೆ 10,000 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಕಳುಹಿಸಲು ಬದ್ಧರಾದ ನಂತರ, ಟ್ರಂಪ್ ಟ್ರೇಡ್ ವಾರ್ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.