ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದಿಂದಲೂ ಟಾಕ್ಸಿಕ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕಳೆದ ಹಲವು ದಿನಗಳಿಂದ ಮುಂಬೈ. ಗೋವಾದಲ್ಲಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಇದೀಗ ಚಿತ್ರತಂಡ ಬೆಂಗಳೂರಿಗೆ ಶಿಫ್ಟ್ ಆಗಿದ್ದು ನಟಿ ನಯನತಾರಾ ಹಾಗೂ ಕಿಯಾರಾ ಅಡ್ವಾಣಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ನಯನತಾರಾ, ಕಿಯಾರಾ, ತಾರಾ ಸುತಾರಿಯಾ, ಹುಮಾ ಖುರೇಶಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಟಾಕ್ಸಿಕ್ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಈ ವರ್ಷ ಯಶ್ ಅವರ ಜನ್ಮದಿನದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದಿಂದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಯಶ್ ಅವರ ರಗಡ್ ಲುಕ್ ಗಮನ ಸೆಳೆದಿತ್ತು. ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ತುಂಬ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.