ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ಆರೋಪ ಕೇಳಿಬಂದಿದೆ. ಚುನಾವಣಾ ರಾಜಕೀಯದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ (Yediyurappa) ಹಾಗೂ ಸಿದ್ದರಾಮಯ್ಯ (Siddaramaiah) ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು (H.D.Deve Gowda) ಹೊಸ ಬಾಂಬ್ ಸಿಡಿಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು, ಬಿಎಸ್ವೈ ನಡುವೆ ಒಳ ಒಪ್ಪಂದ ಇದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಮ್ಯಾಚ್ ಫಿಕ್ಸಿಂಗ್ ಸಂಶಯ ಹುಟ್ಟು ಹಾಕಿದ್ದಾರೆ
ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಕಾಂಗ್ರೆಸ್ನ ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇಕೆ? ಇದು ಏನನ್ನು ಸೂಚಿಸುತ್ತದೆ? ಇಬ್ಬರು ಮಾಜಿ ಸಿಎಂಗಳು ತಂತ್ರಗಾರಿಕೆಯ ತಿಳುವಳಿಕೆ ಹೊಂದಿದ್ದಾರೆ ಎಂಬುದು ಇದರ ಅರ್ಥ. ರಾಜ್ಯದಲ್ಲಿ ಹೀಗಾಗಲು ಬಿಜೆಪಿ ವರಿಷ್ಠರು ಹೇಗೆ ಅವಕಾಶ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಪುತ್ರನ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ, ಈ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸಲ್ಲ ಎಂದು ಬಿಎಸ್ವೈ ತಿಳಿಸಿದ್ದಾರೆ. ಬಿಎಸ್ವೈ ಈ ನಿರ್ಧಾರ ನಾನಾ ಚರ್ಚೆಗೆ ಕಾರಣವಾಗಿದೆ.
ವರುಣಾ ಕ್ಷೇತ್ರ 2008ರಲ್ಲಿ ಸೃಷ್ಟಿಯಾಯ್ತು. ಅಂದಿನಿಂದ 3 ಬಾರಿ ಚುನಾವಣೆ ನಡೆದಿದೆ. 3ರಲ್ಲಿ 2 ಬಾರಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದಿದ್ದಾರೆ, 1 ಬಾರಿ ಯತೀಂದ್ರ ಗೆದ್ದಿದ್ದಾರೆ. ವರುಣಾದಲ್ಲಿ ಲಿಂಗಾಯತ ಮತದಾರರು ಹೆಚ್ಚಿದ್ದರೂ ಬಿಜೆಪಿ ಪ್ರಬಲ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ. ಲಿಂಗಾಯತರನ್ನೇ ಬಿಜೆಪಿ ಅಭ್ಯರ್ಥಿ ಮಾಡಿದ್ರೂ ಸಿದ್ದುಗೆ ಪೈಪೋಟಿ ಕೊಡಬಲ್ಲ ಒಬ್ಬರನ್ನೂ ಬಿಎಸ್ವೈ ಸ್ಪರ್ಧೆಗೆ ಇಳಿಸಿಲ್ಲ. 2008ರಲ್ಲಿ ಹೆಚ್ಡಿಕೆ ಅಧಿಕಾರ ನೀಡದೇ ವಚನ ಭ್ರಷ್ಟರಾದಾಗಿನಿಂದ ಸಿದ್ದು-ಬಿಎಸ್ವೈ ಒಂದಾದರು. ಜರ್ನಾದನ ರೆಡ್ಡಿ ವಿರುದ್ಧ ಸಿದ್ದು ತೊಡೆತಟ್ಟಿ ಸಮರಕ್ಕಿಳಿದಾಗಲೂ ಸಿದ್ದು ಜೊತೆ ಬಿಎಸ್ವೈ ಕಿತ್ತಾಟಕ್ಕೆ ಹೋಗಲಿಲ್ಲ ಎಂಬ ಮಾತಿದೆ. 2013ರಲ್ಲಿ ಕೆಜೆಪಿ ಕಟ್ಟಿ ಬಿಜೆಪಿಗೆ ಡ್ಯಾಮೇಜ್ ಆಗೋ ಹಾಗೆ ಮಾಡಿ ಸಿದ್ದು ಅಧಿಕಾರದ ಗದ್ದುಗೆ ಏರುವಂತೆ ಮಾಡಿದ್ದರು ಎನ್ನಲಾಗಿದೆ.
ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ಗೆ ಯಡಿಯೂರಪ್ಪ ಸೀಟು ಬಿಟ್ಟುಕೊಟ್ಟಿದ್ದರು. ಸಮ್ಮಿಶ್ರ ಸರ್ಕಾರ ಮಾಡಿದಾಗಲೂ ಕುಮಾರಸ್ವಾಮಿ ವಿರುದ್ಧ ಬಿಎಸ್ವೈ ಗುಡುಗಿದರು. ಆದರೆ ಸಿದ್ದರಾಮಯ್ಯ ವಿರುದ್ಧ ಮಾತಾಡಲಿಲ್ಲ. ಕಳೆದ ಬಾರಿ ಯತೀಂದ್ರ ವಿರುದ್ಧ ವಿಜಯೇಂದ್ರ ಕಣಕ್ಕೆ ಇಳಿದೇ ಬಿಟ್ಟರು ಎನ್ನುವಾಗ ಮಗನ ಸ್ಪರ್ಧೆ ಇಲ್ಲ ಅಂತ ಘೋಷಿಸಿದರು. ಈ ಬಾರಿಯೂ ವಿಜಯೇಂದ್ರ ಹೆಸರು ವರುಣಾದಲ್ಲೂ ಕೇಳಿಬಂದರೂ ಬಿಎಸ್ವೈ ಹಿಂಪಡೆದಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.