ಬೆಂಗಳೂರು: ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತೇನೆ. ಅವರಿಗೆ ನನ್ನ ಬೆಂಬಲ ಇದೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಹೋಟೆಲ್ ಅಶೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೀತಿಯ ವ್ಯಕ್ತಿಯ ಪರವಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಲು ಬಂದಿದ್ದೇನೆ. ಸಿನಿಮಾಗೆ ಎಂಟ್ರಿ ಕೊಟ್ಟಾಗ ಯಾರೂ ಗಾಡ್ ಫಾದರ್ ಇರಲಿಲ್ಲ. ನಾನು ಸಿನಿಮಾ ಎಂಟ್ರಿ ಕೊಟ್ಟಾಗ ಬೊಮ್ಮಾಯಿ ರಾಜಕೀಯಕ್ಕೆ ಬಂದರು. ಆ ವ್ಯಕ್ತಿ ಪರವಾಗಿ ನಾನು ಬೆಂಬಲ ಕೊಡುತ್ತೇನೆ ಎಂದು ಹೇಳಿದರು.
Breaking News: ಬಿಜೆಪಿ ಸೇರ್ಪಡೆ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?
ಇಲ್ಲಿ ರಾಜಕೀಯ ಬರುವುದಿಲ್ಲ, ಕಷ್ಟದ ದಿನಗಳಲ್ಲಿ ನಿಂತ ಕೆಲವರ ಪೈಕಿ ಬಸವರಾಜ ಬೊಮ್ಮಾಯಿ ಅವರು ಒಬ್ಬರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅದಲ್ಲದೇ, ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗಲ್ಲ. ಇಂತವರಿಗೆ ಬೆಂಬಲ ಕೊಡಿ ಎಂದು ಹೇಳಿದರೆ ನಾನು ಕೊಡುತ್ತೇನೆ. ಬೇರೆ ಪಕ್ಷದವರು ನನ್ನ ಕಷ್ಟ ಸುಖಕ್ಕೆ ಬಂದಿದ್ದರೆ ನಾನು ಪ್ರಚಾರ ಮಾಡುತ್ತಿದ್ದೆ. ಎಲ್ಲರನ್ನು ಮೆಚ್ವಿಸುವ ಉದ್ದೇಶವಿದ್ದರೆ ಇಲ್ಲಿ ಬರುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿ ಇದ್ದರೂ ಅವರ ಪರವಾಗಿ ನಿಲ್ಲುತ್ತಿದ್ದೆ. ನನ್ನ ಕಷ್ಟದ ದಿನಗಳಲ್ಲಿ ಯಾರಾದರೂ ನನ್ನ ಪರವಾಗಿ ನಿಂತಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದು ತಿಳಿಸಿದರು.
ಪ್ರಕಾಶ್ ರೈ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, ಪ್ರಕಾಶ್ ರೈ ಅವರು ಒಳ್ಳೆ ಕಲಾವಿದ, ಅವರ ಜೊತೆ ಸಿನಿಮಾ ಮಾಡಿದ್ದೇನೆ. ಮುಂದೆ ಸಿನಿಮಾ ಮಾಡಲು ಕಾತರನಾಗಿದ್ದೇನೆ ಎಂದು ಹೇಳಿದರು. ಇನ್ನೂ, ಸಿನಿಮಾದಲ್ಲಿ ತುಂಬಾ ಜನ ಹಣ ಕೊಡುವವರಿದ್ದಾರೆ. ಹಣ ದುಡಿಯಲು ಇಲ್ಲಿ ಬರಬೇಕಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ನಿಲ್ಲಬೇಕು ಎಂದಾದರೆ ಓಪನ್ ಆಗಿ ಹೇಳಿ ನಿಲ್ಲುತ್ತೇನೆ ಎಂದು ಹೇಳಿದ ಸುದೀಪ್, ಬಸವರಾಜ ಬೊಮ್ಮಾಯಿ ಅವರಿಗೆ ಬೇಕಾದ ವ್ಯಕ್ತಿಗಳ ಪರವಾಗಿ ಅವರು ಹೇಳಿದರೆ ಪ್ರಚಾರ ನಡೆಸುತ್ತೇನೆ. ನಾನು ವ್ಯಕ್ತಿಗೆ ಬೆಂಬಲ ನೀಡುತ್ತಿದ್ದೇನೆಯೇ ಹೊರತು ಬಿಜೆಪಿಗಲ್ಲ ಎಂದು ಹೇಳಿದರು.