ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯ ನಡುವೆ ಚುನಾವಣಾ ಅಧಿಕಾರಿಗಳು, ಪೊಲೀಸರು ಮಾತ್ರವಲ್ಲ, ಇದೀಗ ಇಡಿ, ಐಟಿ ಕೂಡ ಎಂಟ್ರಿ ಕೊಟ್ಟಿದೆ. ನಾಳೆಯಿಂದ ಕರ್ನಾಟಕದಲ್ಲಿ ಇಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆಯಷ್ಟೇ (ಏಪ್ರಿಲ್ 4) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಏಪ್ರಿಲ್ 5) ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾಂಗ್ರೆಸ್ ಮುಖಂಡರೊಬ್ಬರ ಮನೆ ಬಾಗಿಲು ತಟ್ಟುವ ಮೂಲಕ ಐಟಿ ಶಾಕ್ (Income Tax Raid) ನೀಡಿದೆ.
ಚುನಾವಣೆ ಸಮಯದಲ್ಲೇ ಬೆಂಗಳೂರು ನಗರದ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕಾಂಗ್ರೆಸ್ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.