ಗದಗ : ಪ್ರಜಾಪ್ರಭುತ್ವವು ಜನರಿಂದ ಮತ್ತು ಜನರಿಗಾಗಿ ನಡೆಸುವ ಸರ್ಕಾರವಾಗಿದೆ. ಹಾಗಾಗಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ನಮ್ಮ ಕರ್ತವ್ಯವೂ ಕೂಡಾ ಆಗಿದೆ ಅಂತಾ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ್ ಅಡವಿಮಠ ಹೇಳಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಪಂ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಜಲ ಸಂಜೀವಿನಿ ತತ್ವದಡಿಯ ಸಮುದಾಯ ಬದು ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಕೇಲವು ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ. ಚುನಾವಣೆ ಯನ್ನು ಅರ್ಥ ಪೂರ್ಣಗೊಳಿಸುವಲ್ಲಿ ಎಚ್ಚರಿಕೆಯ ಮತ್ತು ಜಾಗೃತ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ.
ಆಡಳಿತ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು ಎಂದರು.
ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಹೊಂದಿರುವ ಭಾರತದಲ್ಲಿ ಎಲ್ಲರಿಗೂ ಸಮಾನವಾದ ಮತದಾನ ಮಾಡುವ ಹಕ್ಕಿದೆ. ದೇಶದ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಈ ಹಕ್ಕನ್ನು ಮರೆಯದೇ ಕಡ್ಡಾಯವಾಗಿ ಮತ ಚಲಾಯಿಸೋ ಮೂಲಕ ಸುವ್ಯವಸ್ಥಿತ ಆಡಳಿತ ರಚನೆಗೆ ಕಾರಣರಾಗೋಣ ಎಂದು ತಾಲೂಕ ಪಂಚಾಯತ ನರೇಗಾ ಸಹಾಯಕ ನಿರ್ಧೇಶಕ ಕೃಷ್ಣಪ್ಪ ಧರ್ಮರ ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನದ ಹಕ್ಕು ಸಮರ್ಪಕವಾಗಿ ಕಲ್ಪಿಸಲು ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಹಾಗಾಗಿ ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ಅವರಿಗೆ ಮಾಹಿತಿ ನೀಡಿ ಮತದಾನ ಮಾಡಿಸಿ ಅಂತಾ ಹೇಳಿದರು.
ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ತಾಲೂಕ ಪಂಚಾಯತ ಪಂಚಾಯರ ರಾಜ್ ಸಹಾಯಕ ನಿರ್ಧೇಶಕ ಕುಮಾರ ಪೂಜಾರ ಬೋಧಿಸಿದರು.
ಈ ಸಂದರ್ಭದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತಿ ಪಂಚಾಯತ ಅಭಿವೃದ್ದಿ ಅಧಿಕಾರಿ, ಪಂಚಾಯತ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.