ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ನೀಡಿದ ಕ್ರಿಮಿನಲ್ ಪ್ರಕರಣದ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಮ್ಯಾನ್ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಶರಣಾದರು. ಬಳಿಕ ಅವರನ್ನು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಲಾಯಿತು ಎಂದು ಬಿಬಿಸಿ ವರದಿ ಮಾಡಿದೆ.
ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿದ, ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿದ್ದಾರೆ.
‘ನಮ್ಮ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು’ ಎಂಬ ಕಾರಣಕ್ಕೆ ನೀಲಿಚಿತ್ರ ತಾರೆಯೊಬ್ಬರಿಗೆ ಹಣ ಸಂದಾಯ ಮಾಡಿದ್ದ ಕುರಿತಂತೆ ಟ್ರಂಪ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ‘ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್ ಅವರು, ಕ್ರಿಮಿನಲ್ ಆರೋಪ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನಾನು ನಿರ್ದೋಷಿ’ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರಿಗೆ ಮನವಿ ಸಲ್ಲಿಸಿದರು. ವಿಚಾರಣೆಗೆ ಮ್ಯಾನ್ ಹಾಟನ್ಗೆ ಬಂದ ಟ್ರಂಪ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ, ‘ಇದು ಅವಾಸ್ತವಿಕ. ಬಹುಶಃ ಅವರು ನನ್ನನ್ನು ಬಂಧಿಸಬಹುದು. ಅಮೆರಿಕದಲ್ಲಿ ಇಂತಹದ್ದು ಘಟಿಸುತ್ತಿದೆ ಎನ್ನುವುದನ್ನು ನಂಬಲು ಆಗುತ್ತಿಲ್ಲ‘ ಎಂದು ‘ಟ್ರೂತ್’ ಸೋಷಿಯಲ್ ಮೀಡಯಾ ಖಾತೆಯಲ್ಲಿ ಟ್ರಂಪ್ ಪೋಸ್ಟ್ ಹಾಕಿದ್ದರು.
ಟ್ರಂಪ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಕೋರ್ಟ್ ಹಾಲ್ಗೆ ಕರೆದೊಯ್ಯುವ ಮೊದಲು ಅವರ ಬೆರಳಚ್ಚುಗಳ ಮಾದರಿ, ಹೆಸರು, ವಯಸ್ಸು, ಎತ್ತರ, ತೂಕ ಒಳಗೊಂಡಂತೆ ವ್ಯಕ್ತಿಗತ ಮಾಹಿತಿ ಪಡೆದರು.