ಬೆಂಗಳೂರು: ಬೇಸಿಗೆ ಆರಂಭದ ಬೆನ್ನಲ್ಲೇ ರಾಜಧಾನಿಯಲ್ಲಿ ಜೀವಜಲಕ್ಕೆ ಬೇಡಿಕೆ ಹೆಚ್ಚಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರವಾಸಿಗಳ ನೀರಿನ ದಾಹ ತಣಿಸಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು ದೇಶದಲ್ಲಿ 3ನೇ ಅತಿ ದೊಡ್ಡ ನಗರ ಮತ್ತು 5ನೇ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶ. ಶೈಕ್ಷಣಿಕ ಕೇಂದ್ರವಾಗಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ನೆಲೆಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ತವರಾಗಿರುವ ಬೆಂಗಳೂರು ಹೆಚ್ಚು ಜನರನ್ನು ಸೆಳೆಯುತ್ತಿದೆ.
ನಗರವು ಕಳೆದೆರಡು ದಶಕಗಳಿಂದ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ನಗರದ ಹೊರವಲಯವು ಯೋಜಿತವಲ್ಲದ ರೀತಿಯಲ್ಲಿ ಬೆಳೆದು ಜನಸಂಖ್ಯೆ ಹೆಚ್ಚಳವಾಗಿದೆ. ಜನಸಂಖ್ಯೆ ಕೋಟಿಯ ಗಡಿ ದಾಟಿದೆ. ಜತೆಗೆ ಪ್ರತಿನಿತ್ಯ ನಗರಕ್ಕೆ ಬಂದು ಹೋಗುವ ಜನರ ಸಂಖ್ಯೆ ಸುಮಾರು 25 ಲಕ್ಷದಷ್ಟಿದೆ. ನಿರ್ಮಾಣ ಕಾಮಗಾರಿಗಳು ದುಪ್ಪಟ್ಟಾಗಿವೆ. ನಗರದ ಅತಿ ವೇಗದ ಬೆಳವಣಿಗೆಯು ಮೂಲಸೌಕರ್ಯ ವಲಯಕ್ಕೆ ವಿಶೇಷವಾಗಿ ನೀರು ಸರಬರಾಜು ವ್ಯವಸ್ಥೆ ಮೇಲೆ ಅಗಾಧ ಒತ್ತಡ ಹಾಕುತ್ತಿದೆ.
ಬಿಬಿಎಂಪಿಯ ಒಟ್ಟಾರೆ 800 ಚದರ ಕಿ.ಮೀ. ಪ್ರದೇಶವು ಜಲಮಂಡಳಿ ವ್ಯಾಪ್ತಿಗೆ ಒಳಪಟ್ಟಿದೆ. ಇದರಲ್ಲಿ ಕೇಂದ್ರ ಬೆಂಗಳೂರಿನ 245 ಚ.ಕಿ.ಮೀ., 8 ನಗರ ಸ್ಥಳೀಯ ಸಂಸ್ಥೆಗಳು ಮತ್ತು 7 ಮುನ್ಸಿಪಲ್ ಕಾರ್ಪೊರೇಷನ್ಗಳ 330 ಚ.ಕಿ.ಮೀ., 1 ಪಟ್ಟಣ ಪಂಚಾಯಿತಿ ಹಾಗೂ 10 ಗ್ರಾಮಗಳ 225 ಚ.ಕಿ.ಮೀ. ವಿಸ್ತೀರ್ಣ ಸೇರಿದೆ.
ಜಲಮಂಡಳಿ ಮಾಹಿತಿ ಪ್ರಕಾರ, ನಗರದಲ್ಲಿ10.39 ಲಕ್ಷ ಗೃಹೋಪಯೋಗಿ ಉದ್ದೇಶದ ನೀರಿನ ಸಂಪರ್ಕಗಳಿದ್ದು, ದಿನಕ್ಕೆ ಸದ್ಯ 1,450 ಎಂಎಲ್ಡಿ ಪೂರೈಕೆಯಾಗುತ್ತಿದೆ. ಬೇರೆ ಅವಧಿಗೆ ಹೋಲಿಸಿದರೆ ಬೇಸಿಗೆ ಕಾರಣಕ್ಕೆ ನೀರಿನ ಬಳಕೆ ಪ್ರಮಾಣ ಶೇ.10ರಷ್ಟು ಹೆಚ್ಚಳವಾಗಿದ್ದು, ನಗರಕ್ಕೆ ಪ್ರತಿನಿತ್ಯ ಸುಮಾರು 100 ಎಂಎಲ್ಡಿಯಷ್ಟು ಹೆಚ್ಚುವರಿ ನೀರು ಬೇಕೆಂದು ಅಂದಾಜಿಸಲಾಗಿದೆ.
ಟ್ಯಾಂಕರ್ ನೀರು
ಕಾವೇರಿ ನೀರಿನೊಂದಿಗೆ ಕೊಳವೆ ಬಾವಿಗಳು ನಗರದ ನೀರಿನ ದಾಹ ತಣಿಸಲು ನೆರವಾಗುತ್ತಿವೆ. ಜಲಮಂಡಳಿಯ 10,500 ಕೊಳವೆ ಬಾವಿಗಳು ಸುಸ್ಥಿತಿಯಲ್ಲಿವೆ. ಉಳಿದ 700 ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದೆ. ಕೇಂದ್ರ ವಲಯದ 161, ಪೂರ್ವ ವಲಯದ 91, ದಕ್ಷಿಣ ವಲಯದ 98, ಉತ್ತರ ವಲಯದ 294 ಕೊಳವೆಗಳಲ್ಲಿ ನೀರು ಬತ್ತಿದೆ. ಮತ್ತೊಂದೆಡೆ ಹಲವು ಕೊಳವೆ ಬಾವಿಗಳಲ್ಲಿನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ, ಬಿಬಿಎಂಪಿಯು ಪರಿಸ್ಥಿತಿ ನಿಭಾಯಿಸಲು 2,486 ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿದೆ.
ಥಣಿಸಂದ್ರ, ನಾಗವಾರ ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಜಲಮಂಡಳಿಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಜಲಮಂಡಳಿಯು ಇಂತಹ ಸಮಸ್ಯಾತ್ಮಕ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಸುತ್ತಿದೆ. ಜಲಮಂಡಳಿ ಬಳಿ 8 ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯದ 65 ಟ್ಯಾಂಕರ್ಗಳಿದ್ದು, ದಿನದಲ್ಲಿ 3 ಪಾಳಿಯಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ದಿನದ 24 ತಾಸೂ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಟ್ಯಾಂಕರ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ನೋಡಲ್ ಅಧಿಕಾರಿಗಳ ನೇಮಕ
ಜಲಮಂಡಳಿ ವ್ಯಾಪ್ತಿಯಲ್ಲಿ 37 ಉಪ ವಿಭಾಗಗಳಿವೆ. ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಯ ಸಮರ್ಪಕ ನಿರ್ವಹಣೆಗಾಗಿ ಪ್ರತಿ ವಿಭಾಗಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ನೀರಿನ ಸಮಸ್ಯೆ ಸಂಬಂಧ ದೂರು ಸಲ್ಲಿಕೆಗೆ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1916 ಅಥವಾ 080 22238888 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಈ ದೂರುಗಳನ್ನು ಆಧರಿಸಿ ನೋಡಲ್ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿದ್ದಾರೆ.