ಬೆಂಗಳೂರು: ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಮಾತನಾಡಿ ಚುನಾಯಿತ ಶಾಸಕರ ಕ್ರಿಮಿನಲ್ ಪ್ರಕರಣ ಕುರಿತು ಇತ್ತೀಚೆಗೆ ವರದಿ ಬಂದಿದ್ದು, ಅದರ ಪ್ರಕಾರ ಆಡಳಿತ ಬಿಜೆಪಿ ಪಕ್ಷದ 40 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇನ್ನು ಒಟ್ಟಾರೆ 35% ಶಾಸಕರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಆಡಳಿತ ಪಕ್ಷದವರು ಇತರರಿಗೆ ಮಾದರಿ ಆಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ರಮೇಶ್ ಬಾಬು
ಬಿಜೆಪಿ ವಿರುದ್ಧ ಹರಿಹಾಯ್ದ ಇವರು, ಆಡಳಿತ ಬಿಜೆಪಿ ಪಕ್ಷ ಕ್ರಿಮಿನಲ್ ಅಪರಾಧ ಇರುವ ರೌಡಿ ಶೀಟರ್ ಗಳನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಸೈಲೆಂಟ್ ಸುನೀಲ್ ಹಾಗೂ ಫೈಟರ್ ರವಿ ಅವರ ಪಕ್ಷ ಸೇರ್ಪಡೆ ವಿಚಾರವಾಗಿ ಸಾಕಷ್ಟು ಸುದ್ದಿ ಆಗಿದೆ ಆದ್ರೂ ಏನೂ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ಖಂಡನೀಯ ಎಂದಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕ್ರಿಮಿನಲ್ ಗಳ ಪ್ರಕರಣ ತೆರವು ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಕಿಡಿ ಕಾರಿದರು.
ಸುಪ್ರೀಂಕೋರ್ಟ್ ತೀರ್ಪಿನ ಆದೇಶದ ಮೇರೆಗೆ ಚುನಾವಣಾ ಆಯೋಗ ಕಠಿಣ ನಿಯಮ ಜಾರಿ ಮಾಡಿದೆ. ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡುವಾಗ ಕ್ರಿಮಿನಲ್ ಪ್ರಕರಣದ ಮಾಹಿತಿ ಕಲಾಂ ಅನ್ನು ಕಡ್ಡಾಯವಾಗಿ ತುಂಬಲೇಬೇಕು. ಈ ವಿಚಾರವಾಗಿ ಮಾಹಿತಿ ನೀಡದೇ ಇರುವುದು, ಮುಚ್ಚಿಡುವುದು ಮಾಡಿದರೆ ನಾಮಪತ್ರ ತಿರಸ್ಕರಿಸಲಾಗುವುದು.
ಪಕ್ಷದ ಹೆಸರಲ್ಲಿ ಹೆಸರು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಧರ್ ರೆಡ್ಡಿ ಎಂಬುವವರು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಎಂದು ಹೇಳಿಕೊಂಡಿದ್ದು, ಇದಕ್ಕೆ ಇಂಬು ಕೊಡುವಂತೆ ಬಿಜೆಪಿ ನಾಯಕರು ಇವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇವರು ಬೆಂಗಳೂರು ನಗರ ಪದಾಧಿಕಾರಿಯಾಗಿ ಕೆಲಸ ಮಾಡಿದ್ದು ದುರಂತದ ವಿಷಯವಾಗಿದೆ.
ಹಾಗೆ ಇವರ ವಿರುದ್ಧ 12 ಕ್ರಿಮಿನಲ್ ಪ್ರಕರಣ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, 1997ರಲ್ಲಿ ಜಮೀನು ಪ್ರಕರಣದಲ್ಲಿ ಅನೇಕ ಕೇಸ್ ಸಹ ಇದೆ.ಆದರೂ ಪಕ್ಷ ಇವರಿಗೆ ಮಣೆ ಹಾಕುತ್ತಿರುವುದು ನಾಚೀಕೇಡಿತನ ಎಂದರು.
ಶ್ರೀಧರ್ ರೆಡ್ಡಿ ಮತ್ತು ಸಹಚರರ ವಿರುದ್ಧ ಡಿಜಿಪಿ, ಗೃಹ ಇಲಾಖೆಗೆ ಪತ್ರ
ಆನೇಕಲ್ ತಾಲೂಕಿನ ಜಿಗಣಿ ಹೋಬಳಿ ಮಾಲಗೊಂಡನಹಳ್ಳಿ ಗ್ರಾಮದ ಸರ್ವೆ 76,79ರಲ್ಲಿ 9 ಎಕರೆಯಲ್ಲಿ 450ಕ್ಕೂ ಹೆಚ್ಚು ಕಂದಾಯ ನಿವೇಶನ ಸೃಷ್ಟಿ ಮಾಡಿ ಮಾರಾಟ ಮಾಡಿದ್ದಾರೆ. ಅನೇಕ ಕೆಳ ವರ್ಗದ ಜನರು ನಿವೇಶನ ಪಡೆದುಕೊಂಡಿದ್ದಾರೆ. ಜಯನಗರದ ಕ್ಲಾಸಿಕ್ ಸಂಸ್ಥೆಯ ಮೊಹಮದ್ ಇಲಿಯಾಸ್ ಎಂಬುವವರ ಮೂಲಕ ನಿವೇಶನ ಮಾರಾಟ ಮಾಡಿದ್ದಾರೆ. ಇಲಿಯಾಸ್ ಹಾಗೂ ಅವರ ತಮ್ಮ ಎಂ.ಬಿ ಬಾಬು ಹಾಗೂ ಶ್ರೀಧರ್ ರೆಡ್ಡಿ ಸೇರಿ ಮಾರಾಟವಾಗಿರುವ ಜಮೀನಿಗೆ ಮತ್ತೆ ದಾಖಲೆ ಸೃಷ್ಟಿ ಮಾಡಿ ಖಾಸಗಿ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ.
ಇವರ ವಿರುದ್ಧ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ದಾಖಲಾಗಿರುವ ದೂರು ಪೂರ್ಣ ಪ್ರಮಾಣದಲ್ಲಿ ತನಿಖೆ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ಪರವಾಗಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಈ ಹಗರಣ ಸಿಐಡಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದ್ದೇವೆ.
ಈ ಆರೋಪಕ್ಕೆ ಗುರಿಯಾಗಿರುವ ಶ್ರೀಧರ್ ರೆಡ್ಡಿ ಹಾಗೂ ಅವರ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಿವೇಶನ ಖರೀದಿ ಮಾಡಿರುವವರಿಗೆ ತೊಂದರೆ ಆಗದಂತೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದೇವೆ. ಈ ಆರೋಪಿ ಶ್ರೀಧರ್ ರೆಡ್ಡಿ ತಮ್ಮ ಸರ್ಕಾರದ ಹಸ್ತಕ್ಷೇಪ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿವೇಶನ ಖರೀದಿ ಮಾಡಿ ಮೋಸ ಹೋಗುವವರು ಅನೇಕ ದೂರು ನೀಡಿದ್ದರು ಬಿಜೆಪಿ ಸರ್ಕಾರ ಈತನ ರಕ್ಷಣೆ ಮಾಡುತ್ತಿದೆ. ಈ ಸಂಬಂಧವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತಿದ್ದೇವೆ. ಪತ್ರದ ಜತೆಗೆ 12 ಪ್ರಕರಣಗಳ ಆರೋಪ ಪಟ್ಟಿಯನ್ನು ನಾವು ಸಲ್ಲಿಕೆ ಮಾಡಲಿದ್ದೇವೆ.
ಒಂದು ನಿವೇಶನ ಒಂದಕ್ಕೂ ಹೆಚ್ಚು ಬಾರಿ ಮಾರಾಟ ಮಾಡಿದರೆ ಅದು ಕ್ರಿಮಿನಲ್ ಪ್ರಕರಣ ಆಗಲಿದೆ. ಈತನ ವಿರುದ್ಧ ಸೆಕ್ಷನ್ 447, 427, 504, 506, 420 ಅಡಿಯಲ್ಲಿ ಪ್ರಕರಣ ದಾಖಲಾಗಿವೆ. ರೌಡಿ ಶೀಟರ್ ಗಳ ಪಕ್ಷ ಸೇರಿಸಿಕೊಳ್ಳುವ ಮುಂದುವರಿದ ಭಾಗವಾಗಿ ಇಂತಹ ಕೆಲಸ ಸರ್ಕಾರ ಹಾಗೂ ಬಿಜೆಪಿ ಮಾಡುತ್ತಿದೆ. ಬಿಟಿಎಂ ಕ್ಷೇತ್ರದಲ್ಲಿ ಇಂತಹ ಕ್ರಿಮಿನಲ್ ಪ್ರಕರಣ ಆರೋಪಿಗೆ ಯಾವ ಕಾರಣಕ್ಕೆ ಬೆಂಬಲ ನೀಡುತ್ತಿದೆ?
ಜನರ ಗಮನ ಬೇರೆಡೆ ಸೆಳೆಯಲು ದೇವೇಗೌಡರ ಹೇಳಿಕೆ
ಇನ್ನು ನಿನ್ನೆ ದೇವೇಗೌಡರು ದೆಹಲಿಯಲ್ಲಿ ಒಂದು ಹೇಳಿಕೆ ನೀಡಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಸಂಬಂಧ ಚೆನ್ನಾಗಿದೆ. ವರುಣಾದಲ್ಲಿ ವಿಜಯೇಂದ್ರ ಅವರ ಸ್ಪರ್ಧೆಗೆ ಯಡಿಯೂರಪ್ಪ ಅವರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ.
ನಾನು ದೇವೇಗೌಡರ ಮೇಲೆ ಅಪಾರ ಗೌರವ ಹೊಂದಿದ್ದು, ಅವರ ಬಾಯಲ್ಲಿ ಇಂತಹ ಹೇಳಿಕೆ ಬರಬಾರದು. ಅವರು ಹಾಸನ ಟಿಕೆಟ್ ವಿಚಾರವಾಗಿ ಇರುವ ಗೊಂದಲದ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಯಾವುದೇ ತಿರುಳು ಇಲ್ಲ. ರಾಜ್ಯ ಚುನಾವಣೆಯ ಪ್ರತಿ ಹಂತದಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಆಗಿದೆ. ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಹೊಂದಾಣಿಕೆ ಅಗತ್ಯ ಇರುವುದು ಜೆಡಿಎಸ್ ಪಕ್ಷಕ್ಕೆ ಈ ಬಗ್ಗೆ ಸಿ.ಪಿ ಯೋಗೇಶ್ವರ್ ಅವರೇ ಹೇಳಿದ್ದಾರೆ ಎಂದು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.