ಬೀದರ್ : ಕುಂಭಮೇಳಕ್ಕೆ ತೆರಳಿದ್ದ ಬೀದರ್ನ ಆರು ಜನ ವಾರಾಣಸಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆ ಪೌರಾಡಳಿತ ಸಚಿವ ರಹೀಂ ಖಾನ್ ನಗರದ ಲಾಡಗೇರಿಗೆ ತೆರಳಿ ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಮೃತರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದ ಸಚಿವ ರಹೀಂ ಖಾನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಮುಂದಾದಾಗ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕಿದಾಗ, ಸಚಿವರು ಅವರನ್ನು ಸಮಾಧಾನ ಪಡಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ರಹೀಂಖಾನ್ ಅವರು, ಮೃತರ ಶರೀರಗಳನ್ನು ವಾರಾಣಸಿಯಿಂದ ತರಲು ಸರ್ಕಾರ ವ್ಯವಸ್ಥೆ ಮಾಡಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದರು.
ಇನ್ನು ಅಪಘಾತದಲ್ಲಿ ಮೃತಪಟ್ಟ ಆರು ಜನರ ಶರೀರಗಳನ್ನು ಮೂರು ಆಂಬುಲೆನ್ಸ್ಗಳಲ್ಲಿ ನಗರಕ್ಕೆ ತರಲಾಗುತ್ತಿದೆ. ಗಾಯಗೊಂಡ 7 ಜನರು ವಾರಾಣಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಲಖನೌ ವಿಮಾನ ಕೋಮಾ ಸ್ಥಿತಿಯಲ್ಲಿರುವ ಭಗವಂತ ನಂದಕುಮಾರ (19) ವಾರಾಣಸಿಯ ಬನಾರಸ್ ಟ್ರಾಮಾ ಕೇರ್ ಸೆಂಟರ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
