ಬಸವಪಟ್ಟಣ : ಜಗಜ್ಯೋತಿ ಬಸವೇಶ್ವರರು , ಮಹಾಸಾದ್ವಿ ಶ್ರೀ ಅಕ್ಕಮಹಾದೇವಿ , ಶ್ರೀ ತೋಂಟದ ಸಿದ್ದಲಿಂಗೇಶ್ವರರ ಸಮಾಜಕ್ಕೆ ನೀಡಿದ ಸಂದೇಶಗಳನ್ನು ಪಾಲಿಸಿದರೆ ಇಂದಿನ ಜಟಿಲಾತ್ಮಕ ಅನೇಕ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯುತ್ತದೆ ಎಂದು ಧಾರವಾಡ ಬಳಿಯ ಸತ್ತೂರಿನ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡಿನ ಬಸವಪಟ್ಟಣದ ಎಡೆಯೂರು ಶ್ರೀ ತೋಂಟದ ಸಿದ್ದಲಿಂಗೇಶ್ವರರ ಸ್ಮರಣೋತ್ಸವ , ಜಗನ್ಮಾತಾ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಸ್ಮರಣೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಸಮಾಜದಲ್ಲಿ ಸರ್ವರ ಸಮಾನತೆ ಹಾಗೂ ಸರ್ವರೂ ಸುಖಿಗಳಾಗಿ ಬಾಳಲು ಶರಣರು ಬೋಧಿಸಿರುವ ತತ್ವಗಳು ಬರಿ ಭಾಷಣಕ್ಕೆ ಸೀಮಿತವಾಗಬಾರದು , ಅವುಗಳನ್ನು ಸರ್ವರೂ ಚಾಚೂತಪ್ಪದೇ ಪರಿಪಾಲಿಸಬೇಕು , ಹೀಗೆ ಮಾಡುವದರಿಂದ ಎಲ್ಲ ಜಂಜಾಟಗಳಿಗೆ ಮುಕ್ತಿ ಪಡೆಯಬಹುದು , ಶ್ರೀ ಬಸವೇಶ್ವರರು , ಜಗನ್ಮಾತೆ ಅಕ್ಕಮಹಾದೇವಿ , ಶ್ರೀ ತೋಂಟದ ಸಿದ್ದಲಿಂಗೇಶ್ವರರು ಇಂದಿಗೂ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಅರಕಲಗೂಡು ಕ್ಷೇತ್ರದ ಶಾಸಕ ಡಾ. ಎ.ಟಿ ರಾಮಸ್ವಾಮಿ ಅವರು ಮಾತನಾಡಿ , ಜನ್ಮಕೊಟ್ಟ ತಾಯಿ ದೇವರ ಸಮಾನ , ತಾಯಿ ಸಮಾಜದ ಕಣ್ಣಿದ್ದಂತೆ, ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಮುತ್ತು ಕೊಡುವವಳು ಬಂದ ಮೇಲೆ ತುತ್ತು ಕೊಟ್ಟವಳನ್ನು ಮರೆಯಬಾರದು , ತಾಯಿ ಮಮತೆ ಎಲ್ಲಕ್ಕಿಂತ ಮಿಗಿಲಾದುದು, ಹೆಣ್ಣು ಜಗದ ಕಣ್ಣು ಎಂದು ಬಣ್ಣಿಸಿದರಲ್ಲದೇ , ಧರ್ಮಕಾರ್ಯಗಳಿಂದ ಜಗವನ್ನು ಬೆಳಗಿಸಬಹುದು , ಸ್ವಾಮೀಜಿಗಳಿಂದ ರಾಜ್ಯ ಮತ್ತು ದೇಶ ಅಷ್ಟೇ ಅಲ್ಲದೆ ಜಗತ್ತು ಉಳಿದಿದೆ ಎಂದರು.
ಬಸವಾಪಟ್ಟಣದ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ನೇತೃತ್ವ ವಹಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನ ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕರ್ಪೂರವಳ್ಳಿ ಶ್ರೀ ಜಂಗಮಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ , ಹುಬ್ಬಳ್ಳಿ ಬಳಿಯ ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ದ ಸ್ವಾಮೀಜಿ , ಶ್ರೀ ಉರಿಲಿಂಗ ಮಠದ ಚಂದ್ರಶೇಖರ ಸ್ವಾಮೀಜಿ, ಶ್ರೀ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ , ಶ್ರೀ ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಮಲ್ಲೇಶ ಸ್ವಾಮೀಜಿ, ಜಯದೇವ ಸ್ವಾಮೀಜಿಗಳು ಸೇರಿದಂತೆ ಇನ್ನೂ ಅನೇಕ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದ್ದರು. ಅನೇಕ ಗಣ್ಯರು ಪಾಲ್ಗೊಂಡಿದ್ದರು.