ಮಂಡ್ಯ :- ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಎಐಸಿಸಿ ಅಭ್ಯರ್ಥಿಗಳ 1 ಮತ್ತು 2 ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಿದ್ದಾಜಿದ್ದಿ, ಗೊಂದಲವಿರುವ ಕ್ಷೇತ್ರಗಳ ಪಟ್ಟಿಯನ್ನು ಕೈ ನಾಯಕರು ತಡೆ ಹಿಡಿದಿದ್ದು, ಈ ಪೈಕಿ ಜಿಲ್ಲೆಯ ಮದ್ದೂರು ಕ್ಷೇತ್ರವೂ ಒಂದಾಗಿದೆ. ಕೈ ಅಭ್ಯರ್ಥಿ ಯಾರಾಗ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲೆಯ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿ ಮದ್ದೂರು ಕ್ಷೇತ್ರದ ಅಭ್ಯರ್ಥಿಯನ್ನು ಇನ್ನು ಬಿಡುಗಡೆ ಮಾಡಿಲ್ಲ ಎನ್ನುವುದನ್ನು ನೋಡುವುದಾದರೆ ಇಲ್ಲಿಯೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸಾಕಷ್ಟು ಗೊಂದಲವಿರುವುದು ಎದ್ದು ಕಾಣುತ್ತಿದೆ
ಜಿಲ್ಲೆಯ ಬೇರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಗೊಂದಲ ಏರ್ಪಟ್ಟಿರುವುದು ಮತ್ತು ಇಬ್ಬರು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇರುವುದು ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ. ಏಕೆಂದರೆ ಇಲ್ಲಿ ಸ್ಪರ್ಧಿಸಲು ಟಿಕೆಟ್ ಬಯಸಿದವರು ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ಪುತ್ರ ಎಸ್.ಗುರುಚರಣ್ ಮತ್ತು ಉದ್ಯಮಿ, ಕಾಂಗ್ರೆಸ್ ಮುಖಂಡ ಕೆ.ಎಂ.ಉದಯ್ ಅವರಗಳ
ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಮದ್ದೂರು ಕ್ಷೇತ್ರದ ಅಭ್ಯರ್ಥಿಯನ್ನು ಇನ್ನು ಬಿಡುಗಡೆ ಮಾಡಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಮಂಡ್ಯ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು
1999-2004 ರಲ್ಲಿ ನಡೆದ ಮದ್ದೂರು ವಿಧಾನಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆರಿದರು. ಆನಂತರ ಎಸ್.ಎಂ.ಕೃಷ್ಣ ಅವರು ಕ್ಷೇತ್ರ ತೊರೆದ ನಂತರ ನಡೆದ ಚುನಾವಣೆಯಲ್ಲಿ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವಿನ ನಗೆ ಬೀರಿದ್ದರು. ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಕ್ಷೇತ್ರವು ಜೆಡಿಎಸ್ ಭದ್ರಕೋಟೆಯಾಗಿ ನಿರ್ಮಾಣವಾಯಿತು.
ಆದರೀಗ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ಎರಡು ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವಿಜಯ ಪತಾಕೆ ಹಾರಿಸಿ ಸತತ ಸೋಲಿನ ಸೇಡನ್ನು ತೀರಿಸಿಕೊಂಡು ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದ್ದರು.
ಇಲ್ಲಿಯವರೆಗೂ 7 ಕ್ಷೇತ್ರಗಳಲ್ಲೂ ಯಾರು ಸಹ ಕಾಂಗ್ರೆಸ್ ಶಾಸಕರಿಲ್ಲ. ಹೀಗಾಗಿ ಹೇಗಾದರೂ ಮಾಡಿ 7 ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ನೀಡುವುದರೊಂದಿಗೆ ಕೈ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆನ್ನುವುದು ಕಾಂಗ್ರೆಸ್ ನಾಯಕರ ಬಯಕೆಯಾಗಿದ್ದು, ಅಭ್ಯರ್ಥಿಗಳ ಗೆಲುವಿಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
ಸದ್ಯ ಮದ್ದೂರು ಕ್ಷೇತ್ರಕ್ಕೆ ಹಾಲಿ ಶಾಸಕ ಡಿ.ಸಿ.ತಮ್ಮಣ್ಣನವರೇ ಜೆಡಿಎಸ್ ಅಭ್ಯರ್ಥಿ ಎಂದು ದಳಪತಿಗಳು ಘೋಷಣೆ ಮಾಡಿದ್ದಾರೆ. ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮತ್ತು ಮನ್ ಮುಲ್ ನಿರ್ದೇಶಕಿ ರೂಪ ಅವರುಗಳಲ್ಲಿ ತೀವ್ರ ಪೈಪೋಟಿ ಇದ್ದು, ಬಿಜೆಪಿ ನಾಯಕರು ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ.
ಕಾಂಗ್ರೆಸ್ಗೆ ಮುಖ್ಯವಾಗಿ ಮದ್ದೂರು ಕ್ಷೇತ್ರ ಕಗ್ಗಂಟಾಗಿ ಉಳಿದಿದೆ. ಇಲ್ಲಿ ಪ್ರಭಾವಿ ನಾಯಕರಾದ ಎಸ್.ಗುರುಚರಣ್ ಹಾಗೂ ಕೆ.ಎಂ.ಉದಯ್ ಇಬ್ಬರು ಆಕಾಂಕ್ಷಿಗಳಾಗಿದ್ದು, ಈ ಪೈಕಿ ಎಸ್.ಗುರುಚರಣ್ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಗುರು ತಮ್ಮ ದೊಡ್ಡಪ್ಪ ಎಸ್.ಎಂ.ಕೃಷ್ಣ ಅವರ ಕಡೆಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಉದ್ಯಮಿ, ಕಾಂಗ್ರೆಸ್ ಮುಖಂಡ ಕೆ.ಎಂ.ಉದಯ್ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅತ್ಯಾಪ್ತರಾಗಿದ್ದು, ಟಿಕೆಟ್ ಗಾಗಿ ಬಾರಿ ಕಸರತ್ತು ನಡೆಸುತ್ತಿದ್ದಾರೆ.
ಇದೀಗ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿ ಉಳಿದಿದೆ. ಹೀಗಾಗಿ ಸಾಕಷ್ಟು ಅಳೆದು ತೂಗಿ ಬಹುಶಃ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ. ಆದರೆ, ಕ್ಷೇತ್ರದಲ್ಲಿ ಇಬ್ಬರು ನಾಯಕರು ಶಕ್ತಿ ಮೀರಿ ಲಾಭಿ ಮಾಡುತ್ತಿದ್ದು, ಯಾರಿಗೆ ಟಿಕೆಟ್ ಎಂಬ ಕುತೂಹಲ ಇನ್ನೂ ಕೂಡ ಜೀವಂತವಾಗಿ ಉಳಿಯುವಂತೆ ಮಾಡಿದೆ.
ಕಾಂಗ್ರೆಸ್ನಲ್ಲಿನ ಉಂಟಾಗಿರುವ ಗೊಂದಲ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ವರದಾನವಾಗ ಪರಿಣಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎಂಬುದು ಘೋಷಣೆಯಾಗದಿದ್ದರಿಂದ ಸ್ಥಳೀಯ ಕೈ ನಾಯಕರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಮನೆ ಮಾಡಿದೆ. ಜತೆಗೆ ಕ್ಷೇತ್ರದಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕೊನೆ ಕ್ಷಣದಲ್ಲಿ ಕೈ ಟಿಕೆಟ್ ಯಾರ ಕೈ ಸೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಗಿರೀಶ್ ರಾಜ್ ಮಂಡ್ಯ.