ಢಾಕಾ: ಬಾಂಗ್ಲಾದೇಶದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಢಾಕಾದ ಬಂಗಾಬಜಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸುವಲ್ಲಿ ಸುಮಾರು 700ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಅನೆಕ್ಸ್ಕೊ ಹೆಸರಿನ ಟವರ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಈ ಕಟ್ಟಡದ ನಾಲ್ಕು, ಐದನೇ, ಆರನೇ ಮತ್ತು ಏಳನೇ ಮಹಡಿಗಳು ಗೋದಾಮುಗಳಾಗಿವೆ. ಘಟನೆಯ ಬಗ್ಗೆ ಮಾತನಾಡಿದ ಬಾಂಗ್ಲಾದೇಶದ ಅಗ್ನಿಶಾಮಕ ದಳದ ಮಹಾನಿರ್ದೇಶಕ (ಡಿಜಿ)ರಾಗಿರುವ ಬ್ರಿಗೇಡಿಯರ್ ಜನರಲ್ ಎಂ.ಡಿ.ಮೈನ್ ಉದ್ದೀನ್, ನಾವು 2019 ರಲ್ಲಿ ಈ ಕಟ್ಟಡವನ್ನು ದುರ್ಬಲ ಕಟ್ಟಡವೆಂದು ಘೋಷಿಸಿದ್ದೇವೆ. ನಂತರ ಇಲ್ಲಿ ವ್ಯಾಪಾರ ನಡೆಸದಂತೆ ನಾವು ಅವರಿಗೆ ಸುಮಾರು 10 ಬಾರಿ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.
ನಾವು ಸಾಕಷ್ಟು ಭಾರಿ ಅವರಿಗೆ ಎಚ್ಚರಿಕೆ ನೀಡಿದರು ಇಲ್ಲಿ ವ್ಯಾಪಾರ ಮುಂದುವರೆಸಿದ್ದಾರೆ. ಇದೀಗ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಶಾಹಿದುಲ್ಲಾ ಹಾಲ್ನಿಂದ ಪಂಪ್ ಮೂಲಕ ನೀರು ತರಬೇಕಿದೆ. ವಾಯುಸೇನೆ ಕೂಡ ಹತಿರ್ ಜೀಲ್ನಿಂದ ಹೆಲಿಕಾಪ್ಟರ್ನಲ್ಲಿ ನೀರು ತಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದೆ. ಬುರಿಗಂಗೆಯಿಂದಲೂ ನೀರು ತಂದಿದ್ದೇವೆ. ಮೂರು ಪಡೆಗಳ ಹೊರತಾಗಿ ವಾಸಾ ಕೂಡ ಈ ಕೆಲಸದಲ್ಲಿ ನಮಗೆ ಸಹಾಯ ಮಾಡಿದೆ ಎಂದು ತಿಳಿಸಿದರು.
ಬೆಂಕಿಯಿಂದ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಆದಷ್ಟು ಹೆಚ್ಚಿನ ಮೊತ್ತದ ಪರಿಹಾರ ನೀಡುವುದಾಗಿ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದ್ದಾರೆ. ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಮತ್ತು ಯಾವ ರೀತಿಯ ಹಾನಿಯಾಗಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಬೆಂಕಿ ಅನಾಹುತವನ್ನು ಅತ್ಯಂತ ದುರಂತ ಘಟನೆ ಎಂದು ಬಣ್ಣಿಸಿದ ಹಸೀನಾ, ಈದ್ ಹಬ್ಬದ ಸಮಯದಲ್ಲಿಯೇ ಇಂಥ ಘಟನೆ ನಡೆದಿರುವುದು ಮತ್ತು ಅನೇಕ ವ್ಯಾಪಾರಿಗಳು ನಷ್ಟ ಅನುಭವಿಸಿರುವುದು ನೋವಿನ ಸಂಗತಿ ಎಂದಿದ್ದಾರೆ.