ಇಸ್ಲಾಮಾಬಾದ್: ಕಳೆದ ಕೆಲ ಸಮಯದಿಂದ ಪಾಕಿಸ್ತಾನದಲ್ಲಿ ಜನ ತುತ್ತು ಕೂಳಿಗೂ ಪರದಾಡುತ್ತಿದ್ದಾರೆ. ಈಗಾಗಲೇ ಉಚಿತ ಆಹಾರ ವಿತರಣೆ ವೇಳೆ ಸಾಕಷ್ಟು ಮಂದಿ ಬಲಿಯಾಗಿದ್ದು ಜನ ಕಂಗಾಲಾಗಿದ್ದಾರೆ. ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಪಾಕ್ ಗೆ ಇತರ ಯಾವ ರಾಷ್ಟ್ರಗಳಿಂದಲೂ ನಿರೀಕ್ಷಿತ ನೆರವು ಸಿಗುತ್ತಿಲ್ಲ. ಈ ಮಧ್ಯೆ ಪಾಕ್ ಗೆ ಮತ್ತೊಂದು ಆಘಾತ ಎದುರಾಗಿದೆ.
ಪಾಕ್ ನ ಮಿತ್ರ ರಾಷ್ಟ್ರ ಎಂದು ಹೇಳಿಕೊಳ್ಳುವ ಚೀನಾ ಇದೀಗ ಪಾಕ್ ಅನ್ನು ನಡುನೀರಿನಲ್ಲಿ ಕೈಬಿಟ್ಟಂತೆ ಇದೆ. ದಿವಾಳಿಯ ಹಂತದಲ್ಲಿ ಇರುವ ರಾಷ್ಟ್ರದಲ್ಲಿ ಮೂವತ್ತು ಮೊಬೈಲ್ ಫೋನ್ ತಯಾರಿಕಾ ಘಟಕಗಳು ಬಾಗಿಲು ಮುಚ್ಚಿವೆ. ಪಾಕಿಸ್ತಾನ ಸರ್ಕಾರದ ಬಳಿ ವಿದೇಶಿ ವಿನಿಮಯ ಪ್ರಮಾಣವೂ ಕುಸಿತಗೊಂಡಿರುವುದರಿಂದ ಮೊಬೈಲ್ ತಯಾರಿಕೆಗೆ ಬೇಕಾಗುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಮೊಬೈಲ್ ಉತ್ಪಾದನೆ ಮಾಡುವ ಘಟಕಗಳ ಒಕ್ಕೂಟ ಅನಿವಾರ್ಯವಾಗಿ ಉತ್ಪಾದನೆ ಸ್ಥಗಿತಗೊಳಿಸಲೇಬೇಕಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದೆ. ಜತೆಗೆ ಈ ಘಟಕಗಳಲ್ಲಿ ಇರುವ ಶೇ.90ರಷ್ಟು ಮಂದಿ ಚೀನ ಪರಿಣಿತರು ಕೂಡ ಸ್ವದೇಶಕ್ಕೆ ವಾಪಸಾಗಿದ್ದಾರೆ. ಇದು ದೇಶದ ವರ್ಚಸ್ಸಿಗೆ ಧಕ್ಕೆ ತರುವ ಅಂಶ ಮತ್ತು ಮುಂದಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿಕೂಲ ಪರಿಣಾಮಗಳನ್ನು ತಂದುಕೊಡಲಿದೆ ಎಂದು ಒಕ್ಕೂಟ ಭೀತಿ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಮೊಬೈಲ್ ಉತ್ಪಾದನಾ ಘಟಕಗಳ ಯಾವುದೇ ರೀತಿಯ ಕೋರಿಕೆಗಳನ್ನು ಪರಿಗಣಿಸದಂತೆ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ ಎಂದು ಒಕ್ಕೂಟ ಅಲವತ್ತುತೊಂಡಿದೆ. ಇದೇ ವೇಳೆ, ಮಾರ್ಚ್ಗೆ ಸಂಬಂಧಿಸಿದಂತೆ ಆ ದೇಶದ ಹಣದುಬ್ಬರ ಶೇ.35.37ಕ್ಕೆ ಏರಿಕೆಯಾಗಿದ್ದು, ಐದು ದಶಕಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಧಿಕವಾಗಿದೆ ಎನ್ನಲಾಗುತ್ತಿದೆ.