ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಶ್ವ ವಿಖ್ಯಾತ ಕರಗ ಶಕ್ತ್ಯುತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರ್ಪೂರ ಪೂಜೆ ವೇಳೆ ರಸ್ತೆ ಬದಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಗಾಹುತಿಯಾಗಿದೆ.
ಇಂದು ರಾತ್ರಿ ಕರಗೋತ್ಸವ (Karaga Utsav) ಹಿನ್ನೆಲೆಯಲ್ಲಿ ಪೂಜೆ, ವಿಧಿ-ವಿಧಾನಗಳು ಆರಂಭಗೊಂಡಿದೆ. ಎನ್ ಆರ್ ಸಿಂಗ್ನಲ್ ನಿಂದ ಧರ್ಮರಾಯ ದೇವಸ್ಥಾನದವರೆಗೂ ಕರ್ಪೂರ ಹಚ್ಚಿ ಸೇವೆ ಸಲ್ಲಿಸಲಾಗುತ್ತಿದೆ. ಸುಮಾರು 700 ಮೀಟರ್ ದಾರಿಯುದ್ದಕ್ಕೂ ಕರ್ಪೂರದ ಪೂಜೆ ನಡೆದಿದೆ. ಈ ವೇಳೆ ಅವಘಡ ಸಂಭವಿಸಿದೆ
ಮಾರ್ಚ್ 29 ರಿಂದ ಆರಂಭವಾದ ಕರಗ ಉತ್ಸವದಲ್ಲಿ ಇಂದು ದೌಪದಿಗ ಹೂವಿನ ಕರಗವನ್ನ ಕರಗ ಪೂಜಾರಿ ಜ್ಞಾನೇಂದ್ರ ಹೊತ್ತುಕೊಂಡು ಕರಗ ಬೀದಿಗಳಲ್ಲಿ ಮೆರವಣಿಗೆ ಮಾಡಲಿದ್ದಾರೆ. ಇಂದು ರಾತ್ರಿ 12:30ಕ್ಕೆ ಕರಗ ಶಕ್ತೋತ್ಸವ ಆರಂಭವಾಗಲಿದ್ದು, ಕರಗ ಸಾಗುವ ಮಾರ್ಗದ್ದುದ್ದಕ್ಕೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಕರಗದ ದರ್ಶನ ಪಡೆಯಲಿದ್ದಾರೆ.
ಕರಗ ಮಹೋತ್ಸವವು ಮಾರ್ಚ್ 29ರಿಂದ ಪ್ರಾರಂಭವಾಗಿದೆ. ಒಟ್ಟು 11 ದಿನಗಳ ಕಾಲ ಈ ಕರಗ ನಡೆಯುತ್ತದೆ. ರಾತ್ರಿ 12ರಿಂದ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಹೊರಲಿದ್ದಾರೆ. ಇನ್ನೂ ಎರಡು ದಿನ ಕರಗ ಉತ್ಸವ ನಡೆಯಲಿದೆ.
ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಲಾಗುತ್ತದೆ. ಹಾಲುಬೀದಿ, ಕಬ್ಬನ್ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ನಂತರ ನರಸಿಂಹ ಜೋಯಿಸ್ ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.
ಕರಗ ಶಕ್ತ್ಯೋತ್ಸವ ಹಿನ್ನೆಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ದೇವಸ್ಥಾನದ ಸುತ್ತಮುತ್ತ 32 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಚಿತ್ತ ಹುಣ್ಣಿಮೆಯ ದಿನ ಈ ಕರಗ ನಡೆಯುತ್ತದೆ. ದುಂಡು ಮಲ್ಲಿಗೆಯ ಹೂಗಳಿಂದ ಕರಗವನ್ನು ಅಲಂಕೃತಗೊಳಿಸಲಾಗುತ್ತದೆ.