ಬಾಲಿವುಡ್ ನಟ ಸಲ್ಮಾನ್ ಖಾನ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಸಿನಿಮಾದ ಜೊತೆಗೆ ನಿಜ ಜೀವನದಲ್ಲೂ ಸಲ್ಲು ಅದೆಷ್ಟೋ ಮಂದಿಗೆ ಸ್ಫೂರ್ತಿ. ಸಲ್ಮಾನ್ ವೃತ್ತಿ ಜೀವನದಲ್ಲಿ ತಮ್ಮದೇ ಆದ ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದು ಎಂದಿಗೂ ಅವರನ್ನು ಬ್ರೇಕ್ ಮಾಡುವುದಿಲ್ಲ.
ಸದ್ಯ ಸಲ್ಮಾನ್ ಖಾನ್ ಒಟಿಟಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಒಟಿಟಿಯಲ್ಲಿ ಪ್ರಸಾರ ಆಗುವ ಯಾವುದೇ ಕಾಂಟೆಂಟ್ಗಳಿಗೆ ಸೆನ್ಸಾರ್ ಇಲ್ಲದ ಕಾರಣ ಅಶ್ಲೀಲ ದೃಶ್ಯಗಳು ಹೇರಳವಾಗಿ ತೋರಿಸಲಾಗುತ್ತಿದೆ. ಇದರ ಕುರಿತು ಮಾತನಾಡಿರುವ ಸಲ್ಲು ಬಾಯ್, ‘ಇದು ಭಾರತ. ಇಲ್ಲಿ ನಗ್ನತೆಯ ಪ್ರಸಾರ ನಿಲ್ಲಬೇಕು’ ಎಂದಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ವೇಳೆ ಸಲ್ಮಾನ್ ಖಾನ್ ಗೆ ಒಟಿಟಿಯ ಒಳಿತು ಹಾಗೂ ಕೆಡಕುಗಳ ಬಗ್ಗೆ ಕೇಳಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಸಲ್ಮಾನ್, ‘ಒಟಿಟಿಗೆ ಸೆನ್ಸಾರ್ಶಿಪ್ ಬೇಕು. ನಗ್ನತೆ, ಕೆಟ್ಟ ಪದಗಳ ಬಳಕೆ ನಿಲ್ಲಬೇಕು. ಸಣ್ಣ ಮಕ್ಕಳು ಕೂಡ ಮೊಬೈಲ್ನಲ್ಲಿ ಈ ರೀತಿಯ ಕಾಂಟೆಂಟ್ನ ನೋಡುವ ಸಾಧ್ಯತೆ ಇರುತ್ತದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದನ್ನು ನೋಡುತ್ತೇನೆ ಎಂದು ನಿಮ್ಮ ಮಗಳು ಮೊಬೈಲ್ ತೆಗೆದುಕೊಂಡು ಈ ರೀತಿಯದ್ದನ್ನು ನೋಡಿದರೆ ಅದನ್ನು ನೀವು ಇಷ್ಟಪಡುತ್ತೀರಾ? ಒಟಿಟಿಗೆ ಸೆನ್ಸಾರ್ಶಿಪ್ ತಂದರೆ ವೀಕ್ಷಕರ ಸಂಖ್ಯೆ ಹೆಚ್ಚಲಿದೆ’ ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ.
ಬಿಕಿನಿ, ಕಿಸ್ಸಿಂಗ್ ದೃಶ್ಯಗಳ ಬಗ್ಗೆಯೂ ಸಲ್ಲು ಅಸಮಾಧಾನ ಹೊರಹಾಕಿದ್ದಾರೆ. ‘ನೀವು ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುತ್ತೀರಿ. ದೇಹವನ್ನು ಎಕ್ಸ್ಪೋಸ್ ಮಾಡುತ್ತೀರಿ. ಮನೆಗೆ ಹೋದಾಗ ನಿಮ್ಮ ಮನೆಯ ವಾಚ್ಮನ್ ಕೂಡ ಅದನ್ನೇ ವೀಕ್ಷಿಸುತ್ತಿರುತ್ತಾನೆ. ಭದ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ನೀವು ಯಾವಾಗಾಲೂ ನಿಮ್ಮ ಗಡಿ ದಾಟಬಾರದು. ನಾವು ಇರೋದು ಭಾರತದಲ್ಲಿ’ ಎಂದು ಸಲ್ಮಾನ್ ಹೇಳಿದ್ದಾರೆ.