ಮಂಗಳೂರು: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ (BJP) ಯಿಂದ ಮತ್ತೊಂದು ಹೊಸ ಅಸ್ತ್ರ ಪ್ರಯೋಗವಾಗಿದೆ. ಎಲೆಕ್ಷನ್ ಟೈಮಲ್ಲೇ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Kumar Nettaru) ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ಹೊತ್ತಲ್ಲಿ ಇದು ಬಿಜೆಪಿಗೆ ಪ್ಲಸ್ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದಲ್ಲಿ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 2,700 ಚದರ ಅಡಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ಮನೆ ನಿರ್ಮಾಣ ಮಾಡುತ್ತಿದೆ
2022ರ ನ. 2ರಂದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಯ ನೆಟ್ಟಾರುವಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದರು. ಸದ್ಯ ಮನೆ ನಿರ್ಮಾಣ ಕಾರ್ಯ ವೇಗವಾಗಿ ಪೂರ್ತಿಗೊಂಡು ಏ.27 ರಂದು ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಇತ್ತ ಪ್ರವೀಣ್ ಪತ್ನಿಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ.
2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರವೀಣ್ ಹತ್ಯೆ ಬಳಿಕ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು. ಹತ್ಯೆ ವೇಳೆ ಡ್ಯಾಮೇಜ್ ಆದ್ರೂ ಕುಟುಂಬದ ಪರ ನಿಂತು ಬಿಜೆಪಿ ಡ್ಯಾಮೇಜ್ ಸರಿಪಡಿಸಿಕೊಂಡಿದೆ.