ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇದೀಗ ದಿಲ್ಲಿಗೆ ತಲುಪಿದೆ. 224 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಾಜ್ಯ ಚುನಾವಣಾ ಸಮಿತಿ ಸಿದ್ಧಪಡಿಸಿದ್ದು, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆದ ಬಳಿಕ ಪಟ್ಟಿ ಅಂತಿಮಗೊಳ್ಳಲಿದೆ. ಆದರೆ ಈ ಬಾರಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಟಿಕೆಟ್ ಕೈತಪ್ಪುವುದು ಖಚಿತವಾಗಿದೆ. ಅದೇ ರೀತಿ ಪಿಎಸ್ಐ ಹಗರಣದಲ್ಲಿ ಲಂಚ ಆರೋಪವನ್ನು ಎದುರಿಸುತ್ತಿರುವ ಕನಕಗಿರಿ ಕ್ಷೇತ್ರದ ಬಸವರಾಜ ದಡೇಸಗೂರು ಅವರಿಗೆ ಟಿಕೆಟ್ ಕೊಡ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಇನ್ನು, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕುಂದಾಪುರದಿಂದ ಈ ಬಾರಿ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬದಲಾಗಿ ಪುತ್ರ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುವುದನ್ನು ಖಚಿತಗೊಳಿಸಿದ್ದಾರೆ.
ಇನ್ನು, ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಕೊಡಲು ಭಾರೀ ವಿರೋಧವಿದೆ. ಆಯನೂರು ಮಂಜುನಾಥ್ ಅವರು ಈಶ್ವರಪ್ಪಗೆ ಟಿಕೆಟ್ ಕೊಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಶ್ವರಪ್ಪ ವಿಚಾರವಾಗಿ ಪಕ್ಷ ಏನು ತೀರ್ಮಾನವನ್ನು ಕೈಗೊಳ್ಳಲಿದೆ ಎಂಬುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾವೇರಿ ನಗರ ಶಾಸಕ ನೆಹರೂ ಓಲೆಕಾರ್ ವಿರುದ್ಧವೂ ಭ್ರಷ್ಟಾಚಾರದ ಆರೋಪ ಇದೆ.
ಇನ್ನು, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಕ್ಕ ಬ್ಯಾಡಗಿ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ತೆರದಾಳದಲ್ಲಿ ಸಿದ್ದು ಸವದಿ ವಿರುದ್ಧ ಕಾರ್ಯಕರ್ತರ ಅಸಮಾಧಾನವಿದೆ. ಎಂಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ನಾಯಕರ ಸಮ್ಮುಖದಲ್ಲಿಯೇ ಒಂದು ಗುಂಪಿನ ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.
ಅದೇ ರೀತಿಯಲ್ಲಿ ವಲಸಿಗ ಶಾಸಕರಾದ ಅಥಣಿಯ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ವಿಚಾರವಾಗಿ ಪಕ್ಷ ಏನು ನಿಲುವು ಕೈಗೊಳ್ಳಲಿದೆ ಎಂಬುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಅದೇ ರೀತಿಯಲ್ಲಿ ತೆರವಾಗಿರುವ ಕ್ಷೇತ್ರಗಳಾದ ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಸ್ಥಾನಕ್ಕೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ. ಸವದತ್ತಿಯಲ್ಲಿ ಆನಂದ್ ಮಾಮನಿ ಕುಟುಂಬಸ್ಥರಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಾಲಿ ಶಾಸಕರ ಕುಟುಂಬಕ್ಕೆ ಟಿಕೆಟ್!
ಈ ಬಾರಿ ಕೆಲವು ಹಾಲಿ ಶಾಸಕರು ಪುತ್ರರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್, ಮುಧೋಳದಲ್ಲಿ ಗೋವಿಂದ ಕಾರಜೋಳನ ಪುತ್ರ ಉಮೇಶ್ ಕಾರಜೋಳ, ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಮಗ ಡಾ. ಸಿದ್ಧಾರ್ಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.