ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕಿಂತ ಪೂರ್ವದಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವ, ಸಾಗಾಟ ಮಾಡುವ, ಸಂಗ್ರಹಿಸುವ, ಮಾರಾಟ ಮಾಡುವ ಸಾಧ್ಯತೆಗಳಿರುವುದರಿಂದ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅಧಿಕಾರಿ ಕೆ.ಪ್ರಶಾಂತಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 1 ರಿಂದ ಎಪ್ರಿಲ್ 5 ರವರೆಗೆ ಜಿಲ್ಲೆಯಾದ್ಯಂತ ಕಾರ್ಯಕಾರಿ ಅಧಿಕಾರಿಗಳು ಒಟ್ಟು 32 ಘೋರ ಪ್ರಕರಣಗಳು, 17 ಸನ್ನದು ಷರತ್ತು ಉಲ್ಲಂಘನೆ ಪ್ರಕರಣಗಳು ಹಾಗೂ ಕಲಂ.15ಎ ಅಡಿಯಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಮಾಂಸಾಹಾರಿ ಖಾನಾವಳಿ, ಗೂಡು ಅಂಗಡಿ, ಇತ್ಯಾದಿಗಳ ಮೇಲೆ 65 ಪ್ರಕರಣಗಳು ಸೇರಿ 114 ಪ್ರಕರಣಗಳು ದಾಖಲಿಸಿದ್ದು ಒಟ್ಟು 589.710 ಲೀಟರ್ ಮದ್ಯ, 11.600 ಲೀಟರ್ ಗೋವಾ ಮದ್ಯ, 53 ಲೀಟರ್ ಬೀಯರ್, 12 ದ್ವಿಚಕ್ರ ವಾಹನ ಹಾಗೂ 2 ಮಾರುತಿ ಓಮಿನಿ ಹಾಗೂ 1 ಕಾರು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಳಾಗಿದೆ ಎಂದಿದ್ದಾರೆ.
ಈ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮದ್ಯ ಮತ್ತು ಬೀಯರ್ ಮೌಲ್ಯ 2,70,951 ರೂಪಾಯಿ ಹಾಗೂ ವಾಹನಗಳ ಮೌಲ್ಯ 19,50,000 ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯ 22,20,951 ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.