ಬೆಂಗಳೂರು: ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ನಡೆಯುತ್ತಿದೆ. ಇಲ್ಲಿವರೆಗೂ 10 ಪಂದ್ಯಗಳು ಮುಗಿದಿದ್ದು, ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳು ಐಪಿಎಲ್ ಟೂರ್ನಿಯನ್ನು ಕಣ್ತುಂಬಿಸಿಕೊಳ್ಳುವ ಮೂಲಕ ಆನಂದಿಸುತ್ತಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಕಷ್ಟು ಟ್ರೆಂಡ್ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೆ ಇದ್ದರೂ ಆರ್ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ ಅಥವಾ ಸೋತರೂ ಆರ್ಸಿಬಿ ತಂಡವನ್ನು ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು ಇವರಾಗಿದ್ದಾರೆ. ಏಕೆಂದರೆ ಕಳೆದ 15 ಆವೃತ್ತಿಗಳಲ್ಲಿ ಒಮ್ಮೆಯೂ ಆರ್ಸಿಬಿ ಪ್ರಶಸ್ತಿ ಗೆದ್ದಿಲ್ಲವಾದರೂ ಅಭಿಮಾನಿಗಳ ಪ್ರೀತಿ, ಬೆಂಬಲ, ನಂಬಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.
ಒಂದಲ್ಲ ಒಂದು ದಿನ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ರಾಸ್ ಟೇಲರ್, ಡೇನಿಯಲ್ ವೆಟೋರಿ, ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಅವರಂಥ ಘಟಾನುಘಟಿ ಆಟಗಾರರು ಆರ್ಸಿಬಿ ಪರ ಆಡಿದ್ದಾರೆ.
ಆದರೆ, ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಉದ್ಘಾಟನಾ ಆವೃತ್ತಿಯಿಂದ ಇಲ್ಲಿಯವರೆಗೂ ಆರ್ಸಿಬಿ ಪರ ಆಡುತ್ತಿದ್ದಾರೆ. ಈ ಒಂದು ಅಂಶ ಕೂಡ ಆರ್ಸಿಬಿ ತಂಡದಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಈ ಕಾರಣದಿಂದಲೇ ಅಭಿಮಾನಿಗಳು ಸಾವಿರಾರು ಕಿ.ಮೀ ಕ್ರಮಿಸಿ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿಗೆ ಬರುವುದುಂಟು.
ಆರ್ಸಿಬಿ ತಂಡಕ್ಕೆ ಬಹು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆಂಬುದಕ್ಕೆ ಒಂದು ಉತ್ತಮ ಉದಾಹರಣಿ ಇಲ್ಲಿದೆ. ಏಪ್ರಿಲ್ 2 ರಂದು ನಡೆದಿದ್ದ 2023ರ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ನೇಪಾಳದಿಂದ ಆರ್ಸಿಬಿ ಅಭಿಮಾನಿಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಮುಫಾದಲ್ ವೋಹ್ರಾ ಎಂಬ ವ್ಯಕ್ತಿ ತಮ್ಮ ಟ್ವಿಟರ್ನಲ್ಲಿ ನೇಪಾಳದಿಂದ ಬಂದಿದ್ದ ಆರ್ಸಿಬಿ ಅಭಿಮಾನಿಗಳು ಹಿಡಿದಿದ್ದ ಬ್ಯಾನರ್ ಫೋಟೋವನ್ನು ಹಂಚಿಕೊಂಡಿದ್ದಾರೆ. ” ಆರ್ಸಿಬಿ ಪಂದ್ಯ ಹಾಗೂ ವಿರಾಟ್ ಕೊಹ್ಲಿಯನ್ನು ನೋಡುವ ಆಸೆಯನ್ನು ತೀರಿಸಿಕೊಳ್ಳಲು ನೇಪಾಳದಿಂದ 2376 ಕಿ.ಮೀ ಕ್ರಮಿಸಿ ಬೆಂಗಳೂರಿಗೆ ಅಭಿಮಾನಿಗಳು ಬಂದಿದ್ದಾರೆ,” ಎಂದು ತಾವು ಹಂಚಿಕೊಂಡಿರುವ ಫೋಟೋಗೆ ಈ ರೀತಿಯ ಶೀರ್ಷಿಕೆ ನೀಡಿದ್ದಾರೆ.