ಬೆಂಗಳೂರು: ಆರ್ಸಿಬಿ (RCB) ಅಭಿಮಾನಿಗಳೇ ಎಚ್ಚರವಾಗಿರಿ. ಬೆಂಗಳೂರಿನಲ್ಲಿ (Bengaluru) ಕ್ರಿಕೆಟ್ (Cricket) ಪಂದ್ಯಗಳ ನಕಲಿ ಟಿಕೆಟ್ಗಳು (Fake Tickets) ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.
ಹೌದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದಿದ್ದ ಮುಂಬೈ ಹಾಗೂ ಆರ್ಸಿಬಿ ತಂಡಗಳ ನಡುವಿನ ಪಂದ್ಯದ ವೇಳೆ ಭಾರೀ ಸಂಖ್ಯೆಯಲ್ಲಿ ನಕಲಿ ಟಿಕೆಟ್ ಮಾರಾಟವಾಗಿದೆ.
ಏ.2 ರಂದು ಆರ್ಸಿಬಿ ಮತ್ತು ಮುಂಬೈ ತಂಡದ ಪಂದ್ಯದ ವೇಳೆ ಹಲವು ಟಿಕೆಟ್ಗಳು ಸ್ಕ್ಯಾನ್ ಆಗುತ್ತಿರಲಿಲ್ಲ. ಟಿಕೆಟ್ ಸ್ಕ್ಯಾನ್ ಆಗದೇ ಇದ್ದರೂ ಸ್ಕ್ಯಾನರ್ನಲ್ಲಿ ತಾಂತ್ರಿಕ ದೋಷ ಇದ್ದಿರಬಹುದು ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ಒಳಗಡೆ ಬಿಟ್ಟಿದ್ದರು. ಆದರೆ ಈಗ ಟಿಕೆಟ್ ಯಾಕೆ ಸ್ಕ್ಯಾನ್ ಆಗಿಲ್ಲ ಎನ್ನುವುದ್ದಕ್ಕೆ ಕಾರಣ ಪತ್ತೆಯಾಗಿದೆ.
ಆರ್ಸಿಬಿಯ ಮೊದಲ ಪಂದ್ಯಕ್ಕೆ ಬರೋಬ್ಬರಿ 7 ಸಾವಿರಕ್ಕೂ ಅಧಿಕ ನಕಲಿ ಟಿಕೆಟ್ಗಳು ಮಾರಾಟವಾಗಿದೆ. ಈ ನಕಲಿ ಟಿಕೆಟ್ಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಆಗದೇ ಇದ್ದರೂ ತಾಂತ್ರಿಕ ಸಮಸ್ಯೆಯೆಂದು ಭಾವಿಸಿದ್ದ ಸಿಬ್ಬಂದಿ ಎಲ್ಲರನ್ನೂ ಸ್ಟೇಡಿಯಂನ ಒಳಗಡೆ ಪ್ರವೇಶಿಸಲು ಅನುಮತಿ ನೀಡಿದ್ದರು.
ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಟ್ಟು 33 ಸಾವಿರ ಸೀಟುಗಳ ಬದಲಿಗೆ 40 ಸಾವಿರ ಟಿಕೆಟ್ಗಳು ಮಾರಾಟವಾಗಿತ್ತು. ಈಗ ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳು ನಕಲಿ ಟಿಕೆಟ್ಗಳನ್ನು 2-3 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಆರ್ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಫ್ತಿಯಲ್ಲಿ ಹೆಚ್ಚು ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ಪೊಲೀಸರು ಮಫ್ತಿಯಲ್ಲಿದ್ದಾರೆ.