ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಲಕ್ನೋ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯವನ್ನು ಆಡಲಿದೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸಲು ಸಾವಿರ ಸಂಖ್ಯೆಯಲ್ಲಿ ಸ್ಟೇಡಿಯಂನತ್ತ ಬರಲಿದ್ದಾರೆ. ಇದರ ಮಧ್ಯೆಯೇ IPL ಕ್ರಿಕೆಟ್ ಪಂದ್ಯದಲ್ಲಿ ನಕಲಿ ಟಿಕೆಟ್ ದಂಧೆ ಪ್ರಕರಣ ಕಂಡು ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ.
ನಕಲಿ ಟಿಕೆಟ್ ಆಟಕ್ಕೆ ಬ್ರೇಕ್ ಹಾಕಲು ಪೊಲೀಸರ ಪ್ಲಾನ್ ಮಾಡಿದ್ದು, ನಾಳೆಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ ಪಂದ್ಯಕ್ಕೆ ಮಫ್ತಿಯಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ನಾಳೆ ಮಫ್ತಿಯಲ್ಲಿ ಪೊಲೀಸರು ಇರಲಿದ್ದಾರೆ. ನಾಳೆಯ ಪಂದ್ಯಕ್ಕೆ ಸುಮಾರು 300 ಮಫ್ತಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಮಫ್ತಿ ಪೊಲೀಸರು ಯಾರೇ ಟಿಕೆಟ್ ಮಾರಾಟ ಮಾಡಲು ಬಂದರೂ ಕೂಡಲೇ ವಶಕ್ಕೆ ಪಡೆಯಲಿದ್ದಾರೆ. ಪೊಲೀಸರು ಟಿಕೆಟ್ ಮಾರಾಟ ಮಾಡೋರು ಅಷ್ಟೆ ಅಲ್ಲ ಬ್ಲಾಕ್ ನಲ್ಲಿ ಟಿಕೆಟ್ ತಗೋಳೋರಿಗೂ ಬಿಸಿ ಮುಟ್ಟಿಸಲಿದ್ದಾರೆ.
ಹಿಂದೆ ನಡೆದ ಮುಂಬೈ ಹಾಗೂ ಬೆಂಗಳೂರು ಪಂದ್ಯದಲ್ಲಿ 7 ಸಾವಿರ ನಕಲಿ ಟಿಕೆಟ್ ಮಾರಾಟವಾಗಿದ್ದು ಬೆಳಕಿಗೆ ಬಂದಿದೆ. ಇವು ಸ್ಕ್ಯಾನಿಂಗ್ ವೇಳೆ ನಕಲಿ ಟಿಕೇಟ್ ಅನ್ನೋದು ಬಯಲಾಗಿತ್ತು. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ನಕಲಿ ಟಿಕೆಟ್ ದಂಧೆಗೆ ಕಡಿವಾಣ ಹಾಕಲು ಡಿಸಿಪಿ ಶ್ರೀನಿವಾಸ ಗೌಡ ರವರು ಹೆಚ್ಚುವರಿ ಮಫ್ತಿ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.