ವಿನಯ ಕುಲಕರ್ಣಿ ಮತ್ತು ಅಮೃತ ದೇಸಾಯಿಯ ವೈಯಕ್ತಿಕ ವಿಚಾರಗಳು ಸಹ ಇಲ್ಲಿ ಕಾರ್ಯಕರ್ತರ ಪೋಸ್ಟ್ಗಳಲ್ಲಿ ಹರಿದಾಡುತ್ತಿವೆ. ಕೆಲವರಂತೂ ಮುಖ್ಯ ಪೋಸ್ಟ್ ಬಿಟ್ಟು, ಕಾಮೆಂಟ್ಗಳಲ್ಲಿಯೇ ಸಮರಕ್ಕೆ ಇಳಿದು ಬಿಡುತ್ತಿದ್ದಾರೆ. ಆದರೆ ಈ ಫೇಸ್ ಬುಕ್ ವಾರ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವೊಬ್ಬ ಪದಾಧಿಕಾರಿಯೂ ಇಲ್ಲ. ಬದಲಿಗೆ ಎರಡೂ ಕಡೆಯಲ್ಲಿರುವ ತಳಮಟ್ಟದ ಕಾರ್ಯಕರ್ತರೇ ಈ ಯುದ್ಧದಲ್ಲಿ ಜೋರಾಗಿ ತೊಡಗಿಸಿಕೊಂಡಿದ್ದಾರೆ.
ಇನ್ನು ಈ ಹಿಂದೆ ವಿನಯ ಕುಲಕರ್ಣಿಗೆ ಟಿಕೆಟ್ ಸಿಗದೇ ಇದ್ದಾಗ ಅಮೃತ ದೇಸಾಯಿ ಹಿಂದೊಮ್ಮೆ ಹೇಳಿದ್ದ ‘ಬಂದರೆ ಬಾರೋ ಎನ್ನುವ ಭಾಷಣದ ವಿಡಿಯೋ ಇಟ್ಟುಕೊಂಡು ಬಿಜೆಪಿಗರು ದೊಡ್ಡ ಟ್ರೋಲ್ ಮಾಡಿದ್ದರು. ಆದರೆ ಈಗ ವಿನಯ್ಗೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಈಗ ಏನಂತಿರಿ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಹಾಕುತ್ತಿದ್ದಾರೆ. ಈಗ ನಮ್ಮ ನಾಯಕರಿಗೆ ಟಿಕೆಟ್ ಸಿಕ್ಕಿದ್ದು, ಅಸಲಿ ಆಟ ಇನ್ನು ಮುಂದೆ ಇದೆ ನೋಡಿ ಎನ್ನುವ ಸವಾಲು ಹಾಕಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಫೇಸ್ ಬುಕ್ ವಾರ್ ಜೋರಾಗಿಯೇ ನಡೆದಿದ್ದರೂ ಎರಡೂ ಕಡೆಯ ನಾಯಕರು ತಮ್ಮ ಕಾರ್ಯಕರ್ತರಿಗೆ ಮೀತಿಯಲ್ಲಿರುವಂತೆ ಹೇಳುತ್ತಿಲ್ಲ. ಇತ್ತ ಚುನಾವಣಾ ಆಯೋಗವೂ ಸಹ ಈ ಪೋಸ್ಟ್ಗಳನ್ನ ಗಮನಿಸುತ್ತಿಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಇನ್ನೆಲ್ಲಿಗೋ ಬಂದು ನಿಲ್ಲುವುದರಲ್ಲಿ ಅನುಮಾನವಿಲ್ಲ.
ಕ್ರಮಕ್ಕೆ ಆಗ್ರಹ
ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದು, ಕೂಡಲೇ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ನಿಸ್ಪಕ್ಷಪಾತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಧಾರವಾಡ-71 ಕ್ಷೇತ್ರದ ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾ.30 ರಂದು ರಾಮನವಮಿ ಅಂಗವಾಗಿ ಶೋಭಾಯಾತ್ರೆ ನಡೆಸಲು ಚುನಾವಣಾಧಿಕಾರಿಗಳ ಪರವಾನಿಗಿ ಪಡೆಯಲಾಗಿತ್ತು.
ಶೋಭಾಯಾತ್ರೆ ಸಂದರ್ಭದಲ್ಲಿ ಪೊಲೀಸರು ನೀತಿ ಸಂಹಿತೆ ನೆಪದಲ್ಲಿ ಆ ಶೋಭಾಯಾತ್ರೆಯನ್ನು ತಡೆದು ಸ್ಥಗಿತಗೊಳಿಸಿದರು. ಆದರೆ, ಎ.2 ರಂದು ಬಿಜೆಪಿಯವರು ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಡಿಜೆ ಕೂಡ ಬಳಸಲಾಗಿತ್ತು. ಕೇಂದ್ರ ಸಚಿವರು, ಶಾಸಕರು ಅದರಲ್ಲಿ ಭಾಗವಹಿಸಿದ್ದರು. ಇದಕ್ಕೆ ಸ್ವತಃ ಎಸಿಪಿ ಅವರ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಮಗೆ ಅನ್ವಯ ಆಗುವ ನೀತಿ ಸಂಹಿತೆ ಬಿಜೆಪಿಯವರಿಗೆ ಏಕೆ ಅನ್ವಯ ಆಗುವುದಿಲ್ಲ ಎಂದು ಅವರು ಪ್ರಶ್ನಿಸಿದರು.