ಗುವಾಹಟಿ: ಪ್ರತಿಷ್ಠಿತ 16ನೇ ಐಪಿಎಲ್ (IPL 2023) ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಬ್ಯಾಟಿಂಗ್ ವೈಫಲ್ಯದ ಕೊರತೆಯಿಂದ ಸತತ 3 ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ.
ಪ್ರತಿ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸುತ್ತಿರುವ ನಾಯಕ ಡೇವಿಡ್ ವಾರ್ನರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಹಿಂದಿನ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಕಾಂಗಿಯಾಗಿ ಹೋರಾಡಿ 65 ರನ್ ಗಳಿಸಿ, ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಮಾಡಿರುವುದಲ್ಲದೇ, ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದ್ದ ದಾಖಲೆಯನ್ನೂ ಉಡೀಸ್ ಮಾಡಿದ್ದಾರೆ.
6 ಸಾವಿರ ರನ್ ಪೂರೈಸಿದ 3ನೇ ಆಟಗಾರ: ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಹಾಗೂ ಐಪಿಎಲ್ ಕ್ರಿಕೆಟ್ ಜಗತ್ತಿನ 3ನೇ ಆಟಗಾರ ಎಂಬ ದಾಖಲೆ ಪಟ್ಟಿಗೆ ಈಗ ವಾರ್ನರ್ ಸೇರ್ಪಡೆಯಾಗಿದ್ದಾರೆ. ಡೇವಿಡ್ ವಾರ್ನರ್ 165 ಪಂದ್ಯಗಳಲ್ಲಿ ಅತಿ ವೇಗವಾಗಿ 6 ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, 188 ಇನ್ನಿಂಗ್ಸ್ ಹಾಗೂ ಶಿಖರ್ ಧವನ್ 199 ಇನ್ನಿಂಗ್ಸ್ಗಳಲ್ಲಿ ಈ ದಾಖಲೆ ಮಾಡಿದ್ದರು. ಆದರೆ ಡೇವಿಡ್ ವಾರ್ನರ್ 165 ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ.
ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 225 ಪಂದ್ಯಗಳಲ್ಲಿ 6,727 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 208 ಪಂದ್ಯಗಳಿಂದ 6,370 ರನ್ ಪೂರೈಸಿದ್ದಾರೆ. 5 ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 229 ಪಂದ್ಯಗಳಲ್ಲಿ 5,901 ರನ್ ಬಾರಿಸಿದ್ದು, 6 ಸಾವಿರ ರನ್ ಪೂರೈಸುವ ಸನಿಹದಲ್ಲಿದ್ದಾರೆ.